ಜ್ಞಾನ ವಿಕಾಸ ಸಮನ್ವಯಾಧಿಕಾರಿಯ ಮಾದರಿ ಸೇವಾ ಕಾರ್ಯ




ಸೇವೆಗೆ ತೊಡಗಿಸಿಕೊಳ್ಳಲು ಸಿಗುವ ಅವಕಾಶವನ್ನು ಬಳಸಿಕೊಳ್ಳುವುದರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ಸದಾ ಮುಂದು. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.

ಯಾದಗಿರಿ ತಾಲ್ಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಿವಲೀಲಾ ಎಸ್ ಬಾಗೇವಾಡಿ ಕೊರೋನಾ ವಿಪತ್ತಿನ ಸಂದರ್ಭ ಸಹಾಯ ನಿರೀಕ್ಷಿತರಿಗೆ ಸ್ಪಂದಿಸಿದ  ರೀತಿ ಮಾದರಿಯಾದುದು. ಲಾಕ್ ಡೌನ್ ಘೋಷಣೆಯಾದಾಗ ತಮ್ಮ ಊರಿಗೆ ಮರಳದೆ ತಾನು ಕರ್ತವ್ಯ ನಿರ್ವಹಿಸುವ ಕಾರ್ಯಕ್ಷೇತ್ರದಲ್ಲಿಯೇ ಇದ್ದು ನೆರವಿನ ಅಪೇಕ್ಷೆಯಲ್ಲಿರುವವರಿಗೆ ಸ್ಪಂದಿಸುವ ಕಾರ್ಯವನ್ನು ಮಾಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪೂಜ್ಯರು ಒದಗಿಸಿದ ನೆರವನ್ನು ಕ್ಲಪ್ತ ಸಮಯಕ್ಕೆ  ಒದಗಿಸಿ  ನೆರವಾಗಿದ್ದಾರೆ.

ಶಿವಲೀಲಾ ಅವರು ಕಳೆದ ಒಂದು ವರ್ಷಗಳಿಂದ ಯಾದಗಿರಿ ತಾಲ್ಲೂಕಿನಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಮನೆ ಇರುವುದು ಯಾದಗಿರಿ ನಗರದ ಲಕ್ಷ್ಮೀನಗರದಲ್ಲಿ. ಇಲ್ಲಿ ಲಕ್ಷ್ಮೀ ದೇವಸ್ಥಾನವೊಂದಿದೆ. ನಿತ್ಯ ಭಕ್ತರು ಇಲ್ಲಿ ಬಂದು ಹೋಗುತ್ತಿರುತ್ತಾರೆ. ಶುಕ್ರವಾರ ದಿನದಂದು ಭಕ್ತರ ಸಂದಣಿ ಜಾಸ್ತಿ. ಈ ದಿನ ಭಿಕ್ಷುಕರು ದೇವಸ್ಥಾನದ ಎದುರಿಗೆ  ಪ್ರತ್ಯಕ್ಷವಾಗಿಬಿಡುವುದು ಸಾಮಾನ್ಯ.
ರಸ್ತೆಯ ಬದಿಯಲ್ಲಿರುವ ಈ ದೇವಸ್ಥಾನದ ಮಾರ್ಗದಲ್ಲಿಯೇ ಶಿವಲೀಲಾ ನಿತ್ಯ ಕರ್ತವ್ಯಕ್ಕೆ ತೆರಳುತ್ತಾರೆ. ಉಳಿದ ದಿನಗಳಲ್ಲಿ ರಸ್ತೆ ಬದಿಯಿಂದಲೇ ಲಕ್ಷ್ಮಿ ದೇವಿಗೆ ಕೈಮುಗಿದು ತೆರಳುವ ಇವರು, ಪ್ರತಿ ಶುಕ್ರವಾರ ಮಾತ್ರ ದೇವಸ್ಥಾನಕ್ಕೆ ತೆರಳಿ, ನಮಿಸಿ ಕರ್ತವ್ಯಕ್ಕೆ ಅನುವಾಗುತ್ತಾರೆ. 

ವಾರಕ್ಕೊಮ್ಮೆ ದೇವಾಲಯಕ್ಕೆ ತೆರಳಿದಾಗ ಇವರ ಗಮನ ಸೆಳೆಯುತ್ತಿದ್ದು ವಯಸ್ಸಾಗಿರುವ ಭಿಕ್ಷೆ ಬೇಡಲು ಗುಡಿಯ ಎದುರು ಕುಳಿತುಕೊಳ್ಳುತ್ತಿರುವ ದಂಪತಿಗಳು. ಆಗಾಗ ಮೈ ಕೆರೆದುಕೊಳ್ಳುತ್ತಾ ತೀರಾ ಕಷ್ಟದಲ್ಲಿ ಸಮಯ ಸವೆಸುತ್ತಿರುವ ಇವರ ಸ್ಥಿತಿ ಶಿವಲೀಲಾ ಅವರ ಗಮನ ಸೆಳೆದಿದ್ದರೆ ಅಚ್ಚರಿಯಿಲ್ಲ. ದೇವರಿಗೆ ಕೈಮುಗಿದು ದಾರಿ ಹಿಡಿದು ಹೊರಡುವಾಗ ಬದಿಯಲ್ಲಿ ಕುಳಿತ ಈ ವೃದ್ಧ ದಂಪತಿ ದೈನ್ಯದಿಂದ ಕೈಯೊಡ್ಡಿ, ಪರಿ ಪರಿಯಾಗಿ ಬೇಡಿಕೊಳ್ಳುವ ರೀತಿ ವಿಚಲಿತಗೊಳಿಸುತ್ತಿತ್ತು. ತಿಳಿದಷ್ಟು ಕಾಸು ನೀಡಿ ಅಲ್ಲಿಂದ ಹೊರಡುತ್ತಿದ್ದರು ಶಿವಲೀಲಾ. ಈ ರೀತಿಯ ದಿನಚರಿ ಕಳೆದ ಒಂದು ವರ್ಷಗಳಿಂದಲೂ ನಡೆದು ಬಂದಿದೆ. 

ಈ ವರ್ಷದ ಕೊರೋನಾ ವಿಪತ್ತು ಎಲ್ಲರನ್ನೂ ಕಾಡಿದಂತೆ ಕುಷ್ಠರೋಗಿಗಳನ್ನೂ ಹೈರಾಣಾಗಿಸಿತ್ತು. ಹಸಿವು ಕಟ್ಟಿಕೊಂಡು ದಿನದೂಡುವ ಸ್ಥಿತಿ ತಂದೊಡ್ಡಿತ್ತು. ಭಿಕ್ಷೆ ಬೇಡಲು ಹೊರಡೋಣವೆಂದರೆ ದೇವಾಲಯಕ್ಕೆ ಜನ ಬಂದರೆ ತಾನೇ ಭಿಕ್ಷೆ ದೊರೆಯುವುದು. ಇನ್ನು ಕೆಲಸ ಮಾಡೋಣವೆಂದರೆ ಕುಷ್ಠರೋಗಿ ಎನ್ನುವ ಹಣೆಪಟ್ಟಿ ಇದ್ದುದರಿಂದ ಜನರತ್ತ ಸುಳಿದರೆ ಸಾಕು ಮಾರುದ್ದ ನಿಲ್ಲುವವರೇ ಜಾಸ್ತಿ. ಪರಿಸ್ಥಿತಿ ಹೀಗಿರುವಾಗ ಕೆಲಸ ನೀಡುವವರಾರು?  ಹಾಗಾಗಿ ಕೂಲಿಯೂ ಮರೀಚಿಕೆಯಾಗಿತ್ತು. ಭಿಕ್ಷೆ ಬೇಡಿ ಹಸಿವು ನೀಗಿಸಿಕೊಳ್ಳುತ್ತಿದ್ದ ಆ ವೃದ್ಧ ದಂಪತಿಗಳು ಈಗ ಏನು ಮಾಡುತ್ತಿರಬಹುದು? ಅವರು ಊಟಕ್ಕೆ ಏನು ಮಾಡುತ್ತಿದ್ದಾರೆ? ಹೀಗೊಂದು ಆಲೋಚನೆ ಅದೊಂದು ಶುಕ್ರವಾರ ಮನಸ್ಸಿನಲ್ಲಿ ಮಿಂಚಿ ಮಾಯವಾದಾಗ ಯೋಚನೆಗೆ ಬಿದ್ದರು ಶಿವಲೀಲಾ. ಇಂದು ಶುಕ್ರವಾರ ದೇವಸ್ಥಾನಕ್ಕೆ ಬಂದಿದ್ದರೂ ಬಂದಿರಬಹುದು, ನೋಡಿಯೇ ಬಿಡೋಣ ನಿರ್ಧರಿಸಿ ಹೊರಟರು. ಆದರೆ ಅವರು ಅಲ್ಲಿರಲಿಲ್ಲ. ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ಕಳೆದ ಎರಡು ವಾರದಿಂದ ದೇವಸ್ಥಾನದತ್ತ ಬರದೇ ಇರುವ ಸಂಗತಿ ತಿಳಿದುಬಂತು.
     ಆ ದಂಪತಿಗಳ ಹೆಸರು ನಾಗಣ್ಣ ಮತ್ತು ಕಾಮದೇವಿ. ಇವರ ಬಗ್ಗೆ ದೇವಾಲಯದ ಸುತ್ತಲಿನ  ಸ್ಥಳೀಯರಲ್ಲಿ ವಿಚಾರಿಸಿದಾಗ ಯಾದಗಿರಿ ನಗರದ ಹೊರ ವಲಯದಲ್ಲಿರುವ ಕುಷ್ಠರೋಗಿ ಕಾಲನಿಯಲ್ಲಿ ಅವರಿರುತ್ತಾರೆ ಎನ್ನುವ ವಿಷಯ ತಿಳಿದುಬಂತು. ಹಾಗಾದರೆ ಅಲ್ಲಿ ತೆರಳುವುದು ಹೇಗೆ? ಸ್ಥಳೀಯರಲ್ಲಿಯೇ ಪ್ರಶ್ನಿಸಿದಾಗ ‘ಅಲ್ಲಿಗೆ ಹೋಗಲೇ ಬೇಡಿ. ಅದು ಅಪಾಯಕಾರಿ ಜಾಗ, ಭಯದಿಂದ ಯಾರೂ ಅತ್ತ ಹೋಗುವುದಿಲ್ಲ. ಹೆಣ್ಣುಮಕ್ಕಳಂತೂ ಅತ್ತ ಸುಳಿದ ಉದಾಹರಣೆಯೇ  ಇಲ್ಲ. ನೀವು ಹೋಗುವ ಪ್ರಯತ್ನ ಮಾಡಲೇ ಬೇಡಿ’ ಎಚ್ಚರಿಸಿದರು ಕೆಲವರು. 

ಸದಾ ಕೆಲಸದಲ್ಲಿ ನಿರತರಾಗಿರುತ್ತಿದ್ದ ಕೂಲಿ ಕಾರ್ಮಿಕರು ಸಹ ಕೆಲಸವಿಲ್ಲದೇ ಮನೆಯಲ್ಲಿ ಧಾನ್ಯ ಬರಿದಾಗಿ ಹಸಿವೆಯಿಂದ ಇದ್ದಾರೆ. ಇನ್ನು ಭಿಕ್ಷೆ ಬೇಡಿ ಹಸಿವು ನೀಗಿಸಿಕೊಳ್ಳುತ್ತಿರುವ ನಾಗಣ್ಣ ಹಾಗೂ ಕಾಮದೇವಿ ದಂಪತಿಗಳ ಸ್ಥಿತಿ ಹೇಗಿರಬಹುದು? ಯೋಚಿಸಿದಾಗ ಶಿವಲೀಲಾ ಅವರ ಮನ ಕಲಕಿತ್ತು. ನಕಾರಾತ್ಮಕ ಮಾತುಗಳು ಕೇಳಿ ಬಂದರೂ ಅಂಜದೇ ಬೈಕನ್ನೇರಿ ಹೊರಟರು. ಆ ಕಾಲೊನಿಯವರೆಗೆ ಬೈಕ್ ಹೋಗುತ್ತಿರಲಿಲ್ಲ. ಕಾಲೊನಿಯ ನಡುವೆ ತಗ್ಗಿನ ಸ್ಥಳವೊಂದಿದೆ. ಹೆಚ್ಚು ಕಡಿಮೆ ಅರ್ಧ ಕಿಲೋಮೀಟರ್ ತಗ್ಗಿನ ನಡಿಗೆ ಮಾಡಬೇಕು. ಜನ ಭಯಗೊಳ್ಳುವುದು ಮುಳ್ಳುಕಂಟಿಗಳು ಮುತ್ತಿಕೊಂಡಿರುವ ಈ ತಗ್ಗಿನ ಪ್ರದೇಶವನ್ನು ನೋಡಿಯೇ. ಶಿವಲೀಲಾ ಹೆದರಲಿಲ್ಲ. ಭೀತಿಗೊಳ್ಳಲಿಲ್ಲ. ಕಾಲನಿಯತ್ತ ಹೆಜ್ಜೆ ಹಾಕಿದರು. ಮಾಸ್ಕ್ ಧರಿಸಿ, ಕೈಯಲ್ಲಿ ಬ್ಯಾಗ್ ಹಿಡಿದು, ಕಾಲೊನಿ ಸಮೀಪಿಸುತ್ತಿರುವ ವ್ಯಕ್ತಿಯೊಬ್ಬರನ್ನು ದೂರದಿಂದಲೇ ಗಮನಿಸಿದ ನಾಯಿಗಳು ಕೂಗತೊಡಗಿದವು. ಹತ್ತಾರು ಶ್ವಾನಗಳು ಸೇರಿಕೊಂಡಾಗ ಧ್ವನಿ ತಾರಕಕ್ಕೇರಿತ್ತು. ಹಳ್ಳಿ ಸುತ್ತಿ ಅಭ್ಯಾಸವಿರುವ ಇವರಿಗೆ ನಾಯಿಗಳ ಕೂಗು ಅಪರಿಚಿತವಲ್ಲ. ಧೃತಿಗೆಡದೇ ಊರು ಸಮೀಪಿಸಿದರು. 

ಬೀದಿಯಲ್ಲಿರುವ ಮೊದಲ ಮನೆ ಎದುರಿಗೆ ಕುಳಿತ ಕುಷ್ಠರೋಗಿ ಮಹಿಳೆಯೊಬ್ಬಳನ್ನು ಮಾತಿಗೆಳೆದು ನಾಗಣ್ಣ ಹಾಗೂ ಕಾಮದೇವಿ ದಂಪತಿಯ ಮನೆಯೆಲ್ಲಿ? ವಿಚಾರಿಸಿದರು. ಆಕೆಗೆ ಆಶ್ಚರ್ಯ!!. ಅವರ ಬಗ್ಗೆ ನೀವೇಕೆ ಕೇಳುತ್ತಿದ್ದೀರಿ? ಪ್ರಶ್ನಿಸಿದಳು ಆ ಮಹಿಳೆ. ‘ನಾನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಂದಿದ್ದು. ಕೊರೋನಾ ಸಮಯ ಯಾರಾದರೂ ಸಮಸ್ಯೆಯಲ್ಲಿ ಸಿಲುಕಿದ್ದರೆ ಆಹಾರವನ್ನು ಹಾಗೂ ಧಾನ್ಯಗಳನ್ನು ನೀಡಲು ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಅವಕಾಶ ನೀಡಿದ್ದಾರೆ.  ಕ್ಷೇತ್ರದ ನೆರವನ್ನು ತಲುಪಿಸಲು ಇಲ್ಲಿನ ಸ್ಥಿತಿ ಹೇಗಿದೆ ಅರಿಯಲು ಬಂದಿದ್ದೇನೆ’ ಎಂದರು. “ನಾಗಣ್ಣ ಅವರಿಗೆ ಸೌಲಭ್ಯವನ್ನು ಕೊಡಿ. ಆದರೆ ನಮ್ಮನ್ನು ಮರೆಯಬೇಡಿ. ನಾವು ಸಹ ಭಿಕ್ಷೆ ಬೇಡಿಯೇ ಹೊಟ್ಟೆ ತುಂಬಿಸಿಕೊಳ್ಳಬೇಕು. ಈಗ ಭಿಕ್ಷೆ ದೊರಕುತ್ತಿಲ್ಲ. ಮನೆಯಲ್ಲಿರುವ ನಾಲ್ಕು ಜನ ನೀರು ಕುಡಿದು ಮಲಗುತ್ತಿದ್ದೇವೆ’ ವಿವರಿಸಿ ಕಣ್ಣೀರಾದರು ಮಹಿಳೆ. 
ಆ ಮಹಿಳೆಯ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಶಿವಲೀಲಾ ಆಕೆಯನ್ನು ಸಂತೈಸಿ ಮುಂದುವರೆದರು. ನಾಗಣ್ಣ ದಂಪತಿಗಳನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಒಂದು ಕುಟುಂಬದ ಹಸಿವನ್ನು ನೀಗಿಸುವ ಆಲೋಚನೆಯಲ್ಲಿ ಹೋಗಿದ್ದ ಶಿವಲೀಲಾ ಅವರಿಗೆ ಅಲ್ಲಿರುವ ಹನ್ನೆರಡು ಕುಟುಂಬಗಳು ತೊಂದರೆಯಲ್ಲಿರುವುದು ಗಮನಕ್ಕೆ ಬಂತು. ಎಲ್ಲರ ಮನೆ ಭೇಟಿ ಮಾಡಿದರು. ನಾಗಣ್ಣ ಎಲ್ಲರ ಮನೆಗಳಿಗೂ ಕರೆದೊಯ್ದ. ಕಷ್ಟಗಳ ಸರಮಾಲೆ ಅರಿವಿಗೆ ಬಂದಾಗ ಶಿವಲೀಲಾ ಪರಿಸ್ಥಿತಿ ವಿವರಿಸಿ ಯೋಜನಾಧಿಕಾರಿ ರಾಘವೇಂದ್ರ ಪಟಗಾರ ಅವರಿಗೆ ಕರೆ ಮಾಡಿದರು. ವಿಷಯ ಜಿಲ್ಲಾ ನಿರ್ದೇಶಕರ ಗಮನಕ್ಕೆ ಬಂತು. ಧರ್ಮಸ್ಥಳಕ್ಕೆ ಕಾಗದ ಬರೆಯಲಾಯ್ತು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಡಾ. ಎಲ್.ಎಚ್ ಮಂಜುನಾಥ್ ಅವರು ಕೂಡಲೇ ಸ್ಪಂದಿಸಿದರು. ಆಹಾರದ ಕಿಟ್ ವಿತರಣೆಗೆ ಬೇಕಾದ ಹಣ ಮಂಜೂರು ಮಾಡಿದರು.

 ಸಂತ್ರಸ್ತರಿಗೆ, ಹಸಿದಿರುವವರಿಗೆ ಕೂಡಲೇ ಸ್ಪಂದಿಸಿ ನೆರವು ಒದಗಿಸಬೇಕು. ಯಾರೊಬ್ಬರೂ ಹಸಿವು ಸಹಿಸಿಕೊಂಡಿರಬಾರದು. ಎನ್ನುವ ಆಶಯ ಹೊಂದಿರುವ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅಮ್ಮನವರ ಆಶಯದಂತೆ ಕುಷ್ಠರೋಗಿಗಳ ಮನೆ ಬಾಗಿಲಿಗೆ ಎರಡು ವಾರಗಳ ಕಾಲ ಅಗತ್ಯವಿರುವ ದವಸ ಧಾನ್ಯಗಳ ಕಿಟ್ ಗಳನ್ನು ಮೇಲಾಧಿಕಾರಿಗಳ ಮೂಲಕ ಒದಗಿಸಿದರು. ಜೊತೆಗೆ ಮಾಸ್ಕ್ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪಾಠ ಮಾಡಿದರು. ಲಾಕ್ ಡೌನ್ ಸಮಸ್ಯೆಯ ನಡುವೆ ತೊಂದರೆಗೆ ಸಿಲುಕಿದ ಕುಟುಂಬಗಳನ್ನು ಹುಡುಕಿಕೊಂಡು ಹೋಗಿ ಕರ್ತವ್ಯ ಪ್ರಜ್ಞೆ ಮೆರೆದರು.  

ಶಿವಲೀಲಾ ಅವರು ಸಮಸ್ಯೆಗೆ ಸ್ಪಂದಿಸಿದ ಇನ್ನೊಂದು ಕಾರ್ಯ ನೆನೆಯಲೇಬೇಕು. ಸ್ವಸಹಾಯ ಸಂಘದ ಸದಸ್ಯರೋರ್ವರು ಕರೆ ಮಾಡಿ ‘ನಮಗೆ ಆಹಾರ ಧಾನ್ಯಗಳು ಮನೆಯಲ್ಲಿವೆ. ಆದರೆ ತರಕಾರಿಗಳು ಯಾವವೂ ಸಿಗುತ್ತಿಲ್ಲ. ಅವುಗಳನ್ನು ದೊರಕಿಸಿಕೊಡಲು ಸಾಧ್ಯವೇ?’ ವಿನಂತಿಸಿಕೊಂಡಿದ್ದರು. ಕೂಡಲೇ ಸ್ಪಂದಿಸಿದ ಇವರು ತರಕಾರಿ ಮಾರಾಟ ಮಾಡಲು ಬರುವ ವ್ಯಾಪಾರಿಗಳನ್ನು ಸಂಪರ್ಕಿಸಿ ಟೊಮೆಟೊ, ಚವಳಿಕಾಯಿ, ಬೆಂಡೆಕಾಯಿ, ಪುಂಡಿಪಲ್ಲೆ, ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು, ಮೆಣಸು, ಸೌತೆಕಾಯಿ, ಅವರೆ ಖರೀದಿಸಿದರು. ಇಪ್ಪತ್ತು ಕುಟುಂಬಗಳಿಗೆ ತರಕಾರಿಯ ಅಗತ್ಯತೆ ಇದೆ ಎಂದು ತಿಳಿದು ಪ್ರತ್ಯೇಕ ಪ್ರತ್ಯೇಕ ಕವರ್ ಗಳಲ್ಲಿ ಹಾಕಿ ವಾರಕ್ಕೆ ಸಾಲುವಷ್ಟು ತರಕಾರಿಗಳನ್ನು ನೀಡಿ ಬಂದಿದ್ದಾರೆ. ವಿಶೇಷವೆಂದರೆ ತರಕಾರಿ ಖರೀದಿಗೆ ಇವರು ಸ್ವಂತ ಹಣವನ್ನು ಖರ್ಚು ಮಾಡಿದ್ದಾರೆ. 

‘ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳು ಲಾಕ್ ಡೌನ್ ನೆಪ ಹೇಳಿಕೊಂಡು ಮನೆಯಲ್ಲಿ ಖಾಲಿ ಕುಳಿತುಕೊಳ್ಳಬಾರದು. ಸಮಾಜದಲ್ಲಿ ತೊಂದರೆಗೆ ಒಳಗಾಗಿರುವ ಕೆಲವರಿಗಾದರೂ ಸ್ಪಂದಿಸುವ ಕೆಲಸ ಮಾಡಬೇಕು’ ಎಂದು ಮಾನವಸಂಪನ್ಮೂಲ ವಿಭಾಗ ಹಾಗೂ ಜ್ಞಾನವಿಕಾಸ ಕಾರ್ಯಕ್ರಮದ ನಿರ್ದೇಶಕರಾದ ಶ್ರೀಮತಿ ಮಮತಾ ಹರೀಶ್ ರಾವ್ ಅವರು ಸೂಚಿಸಿದಾಗ ತಾನು ಸಮುದಾಯಕ್ಕೆ ಏನಾದರೂ ಕೊಡುಗೆ ಕೊಡಲೇಬೇಕೆಂದು ನಿರ್ಧರಿಸಿದ ಶಿವಲೀಲಾ ತನ್ನಲ್ಲಿರುವ ಹೊಲಿಗೆ ಯಂತ್ರದಿಂದ ಮಾಸ್ಕ್ ಹೊಲಿಯಲು ಆರಂಭಿಸಿದರು. ಮೊದಲ ದಿನ ಇಪ್ಪತ್ತೈದು ಮಾಸ್ಕ್ ತಯಾರಾದವು. ತಾವಿರುವ ಓಣಿಯಲ್ಲಿ ತರಕಾರಿ ಮಾರಲು ಬರುವ, ಹಾಲು ನೀಡಲು ಬರುವ, ಪೇಪರ್ ಹಾಕಲು ಬರುವವರಿಗೆ ವಿತರಿಸಿದರು. ಮಾಸ್ಕ್ ಹಾಕದೆ ಅಡ್ಡಾಡುವ ಜನರಿಗೆ ಹಂಚಿದರು. ‘ಅಂಗಡಿಯಲ್ಲಿ ಖರೀದಿಸಬೇಕೆಂದರೆ ಹತ್ತು ರೂಪಾಯಿಯಿಂದ ಇಪ್ಪತ್ತೈದು ರೂಪಾಯಿಯವರೆಗೆ ಹಣ ತೆರಬೇಕು. ಹಾಗಾಗಿ ನಾವು ಮಾಸ್ಕ್ ಧರಿಸುತ್ತಿಲ್ಲ’. ಎಂದು ಮಾಸ್ಕ್ ರಹಿತವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ಹೇಳಿದಾಗ ಶಿವಲೀಲಾ  ಸುಮ್ಮನಿರಲಿಲ್ಲ. ತನ್ನ ಬಿಡುವಿನ ಅವಧಿಯಲ್ಲಿ ಇನ್ನಷ್ಟು ಮಾಸ್ಕ್ ಹೊಲಿದು ವಿತರಿಸತೊಡಗಿದರು. ಗುಣಮಟ್ಟದಲ್ಲಿ ರಾಜಿಯಾಗದಂತೆ ಒಟ್ಟು ಆರುನೂರು ಮಾಸ್ಕ್ ಗಳನ್ನು  ವಿತರಿಸಿದ್ದಾರೆ. ಅದಕ್ಕೆ ತಗಲುವ ಖರ್ಚನ್ನು ತಾವೇ ಭರಿಸಿದ್ದಾರೆ. 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿ ಕಾರ್ಯಕರ್ತರು ಜಾಗೃತ ಮನಸ್ಥಿತಿಯಲ್ಲಿರುವವರು. ಸಮುದಾಯ ಅಥವಾ ಕುಟುಂಬ ಕಷ್ಟದಲ್ಲಿರುವಾಗ ಸ್ಪಂದನೆಗೆ ಸದಾ ಮುಂದಿರುವವರು ಎನ್ನುವುದನ್ನು ಶಿವಲೀಲಾ ತೋರಿಸಿಕೊಟ್ಟಿದ್ದಾರೆ. ಇದು ಕೇವಲ ಒಂದು ಉದಾಹರಣೆ ಮಾತ್ರ. ಕ್ಷೇತ್ರದ ಸಹಾಯಹಸ್ತವನ್ನು ನೊಂದವರಿಗೆ ದೊರಕಿಸಿಕೊಡುವಲ್ಲಿ ವಿಶೇಷ ಕಾಳಜಿ ವಹಿಸಿರುವ, ವಹಿಸುತ್ತಿರುವ ಹಲವು ಸಾವಿರ ಕಾರ್ಯಕರ್ತರು ಯೋಜನೆಯಲ್ಲಿದ್ದಾರೆ. ಇವರೆಲ್ಲರ  ಸೇವಾ ಕಾರ್ಯ ಮಾದರಿಯಾಗುವಂತಹುದು.

ಕೋಡಕಣಿ ಜೈವಂತ ಪಟಗಾರ



Comments