ಸಂಕಷ್ಟದಲ್ಲಿರುವ ಕಿರು ವ್ಯಾಪಾರಿ ಕುಟುಂಬಗಳಿಗೆ ಸ್ಪಂದಿಸಿದ ಗ್ರಾಮಾಭಿವೃದ್ಧಿ ಯೋಜನೆ


ಲಿಂಗಸುಗೂರು: ಕೊರೋನಾ ವಿಪತ್ತಿನ ಸಮಯ ತೊಂದರೆಗೆ ಒಳಗಾಗಿದ್ದ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್  ವಿತರಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನ ಹಸ್ತ ಚಾಚಿದೆ.  ಲಿಂಗಸುಗೂರು ತಾಲೂಕಿನ ವಿವಿಧ ಭಾಗಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಅತೀವ ಸಂಕಷ್ಟಕ್ಕೆ ಒಳಗಾಗಿದ್ದವು. ಅಂದು ದುಡಿದು ಅಂದೇ ಉಣ್ಣುವ ಅನಿವಾರ್ಯತೆಯಲ್ಲಿರುವ ಇಂತಹ ಕುಟುಂಬಗಳು ಹಸಿವಿನಿಂದ ಬಾಧಿತಗೊಂಡಿದ್ದವು. ಇಂತಹ ಕುಟುಂಬಗಳನ್ನು ಗುರುತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರ ಮನೆ ಬಾಗಿಲಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದೆ. 

ಮನೆ ಮನೆಗೆ ತಿರುಗಿ ಕೂದಲು ಸಂಗ್ರಹಿಸಿ ದುಡಿಮೆ ಮಾಡಿಕೊಳ್ಳುವವರು, ಪ್ಲಾಸ್ಟಿಕ್ ವಸ್ತುಗಳನ್ನು ಮಾರಿ ಆದಾಯ ಗಳಿಸುತ್ತಿದ್ದವರು, ಬಳೆ ಮಾರಾಟ ಮಾಡುವವರು, ಬ್ಯಾಗ್ ರಿಪೇರಿ ಮಾಡಿ ಕೊಡುವವರು, ಮೀನಿನ ಬಲೆ ಹೆಣೆಯುವವರು, ಕಲ್ಲು  ಒಡೆದು ಬೀಸುಕಲ್ಲು ತಯಾರಿಸಿ ಮಾರುವವರು, ಗೌಂಡಿ ಕೆಲಸ ಮಾಡುವವರು, ತಳ್ಳುಗಾಡಿಯಲ್ಲಿ ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡಿ ಬದುಕಿನ ಬಂಡಿ ತಳ್ಳುತ್ತಿರುವವರು ಹೇರ್ ಪಿನ್, ಕ್ಲಿಪ್ ಗಳನ್ನು ವಿಕ್ರಯಿಸುವವರು, ವಿಭೂತಿ ಉಂಡೆಗಳನ್ನು ಮಾರುವವರು ಹೀಗೆ ನೂರಾರು ಕುಟುಂಬಗಳು ಕೆಲಸವಿಲ್ಲದೇ, ಆದಾಯ ಕೈಗೆಟುಕದೇ ತೊಂದರೆಗೆ ಸಿಲುಕಿದ್ದವು.
ಕೊರೋನಾ ಕಾರಣದಿಂದ ಸಂಚಾರಕ್ಕೆ ನಿರ್ಬಂಧ ವಿಧಿಸಿರುವ ಕಾರಣದಿಂದ ಇಂತಹ ಕುಟುಂಬಗಳು ತಮ್ಮ ಕಾಯಕಕ್ಕೆ ತೆರಳುವಂತಿರಲಿಲ್ಲ. ಸಾಲ ಮಾಡಿಯಾದರೂ ಧಾನ್ಯಗಳನ್ನು ಖರೀದಿಸೋಣವೆಂದರೆ ಕಿರು ವ್ಯಾಪಾರವನ್ನೇ ನೆಚ್ಚಿಕೊಂಡಿರುವ ಇಂತಹ ಕುಟುಂಬಗಳಿಗೆ ಕೈಗಡ ನೀಡುವ ಔದಾರ್ಯ ಹೊಂದಿರುವವರು ಅತಿ ಕಡಿಮೆ. ಹೀಗಾಗಿ ಇಂತಹ ಕುಟುಂಬಗಳು ಹಸಿವಿನ ಸಮಸ್ಯೆಯ ನಡುವೆಯೇ ದಿನದೂಡುತ್ತಿದ್ದವು. ಪರಿಸ್ಥಿತಿಯನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಇಂತಹ ಕುಟುಂಬಗಳ ಮನೆ ಭೇಟಿ ಮಾಡಿ ಅವರ ಅಗತ್ಯತೆಯನ್ನು ತಿಳಿದುಕೊಂಡು ದವಸ ಧಾನ್ಯಗಳ ಕಿಟ್ಟನ್ನು ವಿತರಿಸಿದ್ದಾರೆ.
ದುಡಿಮೆ ಇಲ್ಲದೇ ಇರುವಾಗ, ಬೇಯಿಸಿ ತಿನ್ನೋಣವೆಂದರೆ ಮನೆಯಲ್ಲಿ ಧಾನ್ಯಗಳಿಲ್ಲದೇ ಇರುವಾಗ ಮನೆ ಬಾಗಿಲಿಗೆ ಬಂದು ಕುಶಲೋಪರಿ ವಿಚಾರಿಸಿ ಆಹಾರ ಧಾನ್ಯಗಳನ್ನು ವಿತರಿಸಿದ ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ಯಕ್ಕೆ ಸಂತ್ರಸ್ತರು ಅಭಿನಂದನೆ ಸಲ್ಲಿಸಿದ್ದಾರೆ.

ಲಿಂಗಸುಗೂರು ತಾಲ್ಲೂಕು ಒಂದರಲ್ಲಿಯೇ 219 ಕುಟುಂಬಗಳಿಗೆ 1,88,529 ಮೌಲ್ಯದ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದೆ. ಲಿಂಗಸುಗೂರು ತಾಲೂಕಿನ ಡಿವೈಎಸ್ಪಿ ಶ್ರೀ ಎಸ್.ಎಸ್.ಹುಲ್ಲೂರು, ಮಸ್ಕಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀ ಸಣ್ಣ ವೀರೇಶ್, ಮುದಗಲ್ ಠಾಣೆಯ ಪಿ.ಎಸ್.ಐ ಶ್ರೀ ದಾಕೇಶ್ ಯು, ಲಿಂಗಸೂಗೂರು ಠಾಣೆಯ ಪಿ.ಎಸ್.ಐ ಶ್ರೀ ಪ್ರಕಾಶ್ ಡಂಬಳ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಮಹದೇವಪ್ಪ ಗೌಡ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಸ್ವಾಮಿ, ರಾಯಚೂರು ಜಿಲ್ಲೆಯ ಯೋಜನೆಯ ನಿರ್ದೇಶಕರಾದ ಶ್ರೀ ಸಂತೋಷ್ ಕುಮಾರ್, ಯೋಜನಾಧಿಕಾರಿ ಶ್ರೀ ಹನುಮಂತ ನಾಯ್ಕ್, ಇವರು ಕಿಟ್ ಗಳನ್ನು ವಿತರಿಸಿದರು. ಮೇಲ್ವಿಚಾರಕರಾದ ಬಸವರಾಜ್, ನಳಿನಿ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು. ಸಂತ್ರಸ್ತರನ್ನು ಗುರುತಿಸಿ ಕಿಟ್ ಗಳನ್ನು ಹಾಗೂ ಪೂಜ್ಯರು ನೀಡಿದ ಕೊಡುಗೆಗಳನ್ನು ಸಂತ್ರಸ್ತರಿಗೆ ತಲುಪುವಂತೆ ಮಾಡಲು ತಾಲೂಕಿನ ಸೇವಾ ಪ್ರತಿನಿಧಿಗಳು ಸಕ್ರಿಯ ಪಾತ್ರವಹಿಸಿದ್ದಾರೆ.

ಕೋಡಕಣಿ ಜೈವಂತ ಪಟಗಾರ

Comments