ವಿಪತ್ತಿನಲ್ಲಿರುವವರ ಸಂಕಷ್ಟ ಕಡಿತಗೊಳಿಸಲು ನಮಗೊಂದು ಸುವರ್ಣಾವಕಾಶ ತೆರೆದುಕೊಂಡಿದೆ ಬಳಸಿಕೊಳ್ಳೋಣ...





ಇತ್ತೀಚೆಗೆ ಪ್ರಾಕೃತಿಕ ದುರಂತಗಳು ಪದೇ ಪದೇ ಸಂಭವಿಸುತ್ತಿರುವುದು ನಮ್ಮೆಲ್ಲರ ಅರಿವಿಗೆ ಇದೆ. 2018 ರಲ್ಲಿ ಕೊಡಗು ದುರಂತ, 2019 ರಲ್ಲಿ ಉತ್ತರ ಕರ್ನಾಟಕ ಭಾಗಗಳಲ್ಲಿ ಸಂಭವಿಸಿದ ಪ್ರವಾಹದ ತೊಂದರೆಗಳು,  2020 ರಲ್ಲಿನ ಕೊರೋನಾ ಸಮಸ್ಯೆಗಳನ್ನು ಇಲ್ಲಿ ನೆನೆಯಬಹುದು. ಈ ಎಲ್ಲಾ ಸಂಕಷ್ಟದ ಸಂದರ್ಭಗಳಲ್ಲಿ ತೊಂದರೆಗೆ ಒಳಗಾದ ಕುಟುಂಬಗಳಿಗೆ ಪೂಜ್ಯರು ದವಸ ಧಾನ್ಯಗಳ ವಿತರಣೆ, ಮಾಶಾಸನಗಳನ್ನು ನೀಡುವುದು, ಸೇರಿದಂತೆ ಹಲವು ರೂಪದಲ್ಲಿ ನೆರವು ನೀಡಿ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿದ್ದಾರೆ. 

ಕೇವಲ ಹಣ ನೀಡುವುದರಿಂದ, ಆಹಾರ ಒದಗಿಸುವುದರಿಂದ, ಕಿಟ್ ಗಳನ್ನು ವಿತರಿಸುವುದರಿಂದ ಸಂಕಷ್ಟದಲ್ಲಿರುವವರ ಸಮಸ್ಯೆಗೆ ಸಂಪೂರ್ಣ ಪರಿಹಾರ ನೀಡಲು ಸಾಧ್ಯವಿಲ್ಲ. ಅವು ಒಂದೆರಡು ದಿನ ಅಥವಾ ಒಂದೆರಡು ವಾರಗಳಷ್ಟೇ ನೆರವಾಗಬಹುದು. ಆದರೆ ಸಂಕಷ್ಟಕ್ಕೊಳಗಾದವರ ತೊಂದರೆಯೇನು ಎನ್ನುವುದನ್ನು ಗಮನಿಸಿ ಅದಕ್ಕೆ ಸ್ಪಂದಿಸುವ ಕೆಲಸವನ್ನು ನಮ್ಮ ಉಪಸ್ಥಿತಿಯಲ್ಲಿ ಮಾಡಿದರೆ ಅದು ಇನ್ನೂ ಹೆಚ್ಚಿನ ಪರಿಣಾಮವನ್ನು ಬೀರಬಲ್ಲುದು. ಇದಕ್ಕೆಂದೇ ತೊಂದರೆಗೊಳಗಾದ ಕುಟುಂಬಗಳಿಗೆ ಸಂತೈಸಲು, ಅರಿವು ಮೂಡಿಸಲು, ಪ್ರೇರಣೆ ನೀಡಲು, ಸೇವೆ ಸಲ್ಲಿಸಲು ನಮಗೆ, ನಿಮಗೆಲ್ಲರಿಗೂ ಅಪರೂಪದ ಅವಕಾಶವೊಂದನ್ನು ಪೂಜ್ಯರು ಒದಗಿಸಿಕೊಡುತ್ತಿದ್ದಾರೆ.

ಕಣ್ಣೀರಿನ ಮಡುವಿನಲ್ಲಿರುವ ಕುಟುಂಬಗಳನ್ನು ಸಂತೈಸಲು ನಾವೇನು ಹಣವನ್ನು ಖರ್ಚು ಮಾಡಬೇಕಿಲ್ಲ. ಅದನ್ನು ಪೂಜ್ಯರು ನೋಡಿಕೊಳ್ಳುತ್ತಾರೆ. ನಮ್ಮ ಸೇವಾ ಕಾರ್ಯವೇನಿದ್ದರೂ ಸಂಕಟದಲ್ಲಿರುವ ಕುಟುಂಬಗಳ ಅಥವಾ ವ್ಯಕ್ತಿಗಳನ್ನು ಗುರುತಿಸಿ ಸಂತೈಸುವುದು ಮತ್ತು ನಮ್ಮ ಕೈಲಾದ ಮಟ್ಟಿಗಿನ ಸಹಾಯ ಮಾಡಲು ಧಾವಿಸುವುದು.

ವೈಯಕ್ತಿಕವಾಗಿ ನಾವು ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದೇವೆ? ಲೆಕ್ಕ ಹಾಕಿದರೆ ಬೆರಳಣಿಕೆಯಷ್ಟೂ ಸಿಗಲಿಕ್ಕಿಲ್ಲ. ಮನುಷ್ಯರಾಗಿ ಹುಟ್ಟಿದ ನಾವು ಸ್ವಹಿತ ಚಿಂತನೆಯಲ್ಲಿಯೇ ಜೀವನ ಮುಗಿಸಿ ಹೋಗುವುದರಲ್ಲಿ ಅರ್ಥವಿಲ್ಲ. ಬದುಕಿನ ಅಂತಿಮ ಘಟ್ಟದಲ್ಲಿ ನಿಂತಾಗ ‘ನಾನು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದೇನು?’ ಯೋಚಿಸಿದಾಗ ‘ಶೂನ್ಯ’ ಎನ್ನುವ ಉತ್ತರ ದೊರೆತರೆ ಬದುಕಿನ ಸಾರ್ಥಕತೆ ಅಪೂರ್ಣ.

ಪೂಜ್ಯರು ಹಾಗೂ ಮಾತೃಶ್ರೀ ಅಮ್ಮನವರು ಸಮಾಜದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಮುದಾಯ ಸಂಕಷ್ಟದಲ್ಲಿರುವಾಗ ನಾವು ಅವರನ್ನು ಕೈ ಬಿಡಬಾರದು ಎನ್ನುವ ಆಶಯವನ್ನು  ಹೊಂದಿದ್ದಾರೆ. ವಿಪತ್ತು ನಿರ್ವಹಣಾ ಕಾರ್ಯಕ್ರಮದ ಮೂಲಕ ಈಗ ನಮಗೊಂದು ಕೊಡುಗೆ ನೀಡುವ ಅವಕಾಶ ಕಲ್ಪಿಸುತ್ತಿದ್ದಾರೆ. ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು. ತಕ್ಷಣ ಬಾಚಿಕೊಂಡು ಬಿಡಬೇಕು.
 
ಸ್ವಂತ ಹಣ ಖರ್ಚು ಮಾಡಿ ಸೇವೆ ಸಲ್ಲಿಸಿ ಎಂದರೆ ಅದು ನಮ್ಮಿಂದ ಸಾಧ್ಯವಾಗಲಿಕ್ಕಿಲ್ಲ. ಪೂಜ್ಯರ ಆಶಯದ ವಿಪತ್ತು ನಿರ್ವಹಣಾ ಘಟಕಕ್ಕೆ ಸೇರಿ ನಮ್ಮಿಂದ ಆಗಬಹುದಾದ ಸೇವೆಯನ್ನು ನೀಡಿ ಕೃತಾರ್ಥರಾಗೋಣ.

ಈ ಕಾರ್ಯಕ್ರಮದ ಮೂಲಕ ನಾವು ಹೊಸ ಕುಟುಂಬವೊಂದನ್ನು ಕಟ್ಟುತ್ತಿದ್ದೇವೆ. ಇಲ್ಲಿ ನಾವು ಸ್ವಯಂ ಪ್ರೇರಣೆಯಿಂದ ನೀಡುವ ಸೇವೆಯೇ ಮುಖ್ಯವಾಗಿರುತ್ತದೆ. ತೊಂದರೆಗೆ ಸಿಲುಕಿದ ವ್ಯಕ್ತಿಯ ಅಥವಾ ಕುಟುಂಬದವರ ಸಂಕಷ್ಟ ಕಡಿತಗೊಳಿಸಲು ನಮಗೊಂದು ಸುವರ್ಣಾವಕಾಶ ತೆರೆದುಕೊಂಡಿದೆ. ವಂಚಿತರಾಗಬೇಡಿ.

ಜನಜಾಗೃತಿ ವೇದಿಕೆಯ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳು, ಸ್ವಸಹಾಯ ಗುಂಪುಗಳ ಸದಸ್ಯರು, ಭಜನಾ ಮಂಡಳಿಗಳ ಸದಸ್ಯರು, ಸಾರ್ವಜನಿಕರು, ಯೋಜನೆಯ ಸಿಬ್ಬಂದಿಗಳು ಹೀಗೆ ಸ್ವಯಂ ಪ್ರೇರಣೆಯಿಂದ ಸಮುದಾಯಕ್ಕೆ ಕೊಡುಗೆ ನೀಡಲು ಆಸಕ್ತಿ ಇರುವ ಯಾರೇ ಆದರೂ ಸ್ವಯಂಸೇವಕರ ತಾಲೂಕು ಘಟಕಕ್ಕೆ ಹೆಸರು ನೋಂದಾಯಿಸಬಹುದು. ಈ ಮೂಲಕ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಬಹುದು.



ನಾನು ಈಗ ಹೇಳುವ ವಿಷಯವನ್ನು ಮಾತ್ರ ಅಚ್ಚಳಿಯದಂತೆ ನಿಮ್ಮ ಮನಸ್ಸಿನಲ್ಲಿ  ಮುದ್ರಿಸಿ ಕೊಂಡಿರಿ. ನಾವು ಈ ಕಾರ್ಯಕ್ರಮದ ಮೂಲಕ ಮಾಡುತ್ತಿರುವ ಸೇವಾಕಾರ್ಯವನ್ನು, ಅಂದರೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸ್ಪಂದಿಸುವ ಕಾರ್ಯವನ್ನು, ಅವರ ಕಣ್ಣೀರೊರೆಸುವ ಕಾಯಕವನ್ನು ಹಣದಿಂದ ಅಳೆಯಬೇಡಿ. ನಾನು ಮಾಡಿದ ಸೇವೆಗೆ ಹಣ ನೀಡುತ್ತೀರಾ? ಗೌರವಧನ ಪಾವತಿಸುತ್ತೀರಾ? ಪ್ರಶ್ನಿಸಬೇಡಿ. ನಾವೀಗ ಮಾಡಲು ಹೊರಟಿರುವುದು ಸೇವಾಕಾರ್ಯ. 

ಈ ಹಿಂದೆ ಘಟಿಸಿದ ವಿಕೋಪಗಳ ಸಮಯ ಸ್ವಂತ ಹಣ ಖರ್ಚು ಮಾಡಿ ನೊಂದವರ ಕಣ್ಣೀರು ಒರೆಸಿದ ಸಾವಿರಾರು ಸಹೃದಯರು ನಮ್ಮ ನಡುವೆ  ಇದ್ದಾರೆ. ಅದೃಷ್ಟವೇನೆಂದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸೇವೆ ಸಲ್ಲಿಸಲು ನಾವು ಹಣ ಖರ್ಚು ಮಾಡಬೇಕಿಲ್ಲ.

ಗೌರವಾನ್ವಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಡಾ. ಎಲ್.ಎಚ್ ಮಂಜುನಾಥ್ ಅವರು ವಿಪತ್ತು ನಿರ್ವಹಣಾ ಕಾರ್ಯಕ್ರಮಕ್ಕೆ ವಿಶೇಷ ಕಾಳಜಿ ವಹಿಸಿ ಪ್ರತಿಯೊಂದು ಸ್ವಯಂಸೇವಕರಿಗೂ ದುರಂತಗಳ ನಿರ್ವಹಣೆಯ ಕುರಿತಾಗಿ ತಜ್ಞರಿಂದ ತರಬೇತಿ ಕೊಡಿಸಲು ಈ ವರ್ಷದ ಆಯವ್ಯಯದಲ್ಲಿ ಮೊತ್ತವನ್ನು ನಿಗದಿಪಡಿಸಿರುತ್ತಾರೆ. ಮಾನ್ಯರು ಸ್ವಯಂಸೇವಕರ ತಂಡವನ್ನು ಕಟ್ಟಲು ನಮಗೆ ಸದಾ ಪ್ರೇರಣೆ, ಮಾರ್ಗದರ್ಶನ,  ಸಲಹೆ, ಉತ್ತೇಜನ ನೀಡುತ್ತಿದ್ದಾರೆ. 

ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಅವರು ಕಾರ್ಯಕ್ರಮದ ಅನುಷ್ಠಾನಕ್ಕೆ ವಿಶೇಷ  ಕಾಳಜಿ ವಹಿಸಿ ನಿರಂತರ ಸ್ಫೂರ್ತಿ ತುಂಬುತ್ತಿದ್ದಾರೆ. 

ಪ್ರಾದೇಶಿಕ ನಿರ್ದೇಶಕರು, ಜಿಲ್ಲಾ ನಿರ್ದೇಶಕರು, ಯೋಜನಾಧಿಕಾರಿಗಳ ಮಾರ್ಗದರ್ಶನ, ಸಲಹೆ ಸೂಚನೆಗಳು ನಮಗೆ ಸದಾ ಬೆಂಬಲಕ್ಕೆ ನಿಲ್ಲಲಿದೆ. ಪ್ರೇರಣಾದಾಯಿ ಆಗಲಿದೆ.

ಪೂಜ್ಯರು ಹಾಗೂ ಮಾತ್ರಶ್ರೀ ಅಮ್ಮನವರ ಆಶೀರ್ವಾದದಿಂದ ಪ್ರತಿ ತಾಲ್ಲೂಕಿನಲ್ಲಿ 'ತಾಲ್ಲೂಕು ವಿಪತ್ತು ನಿರ್ವಹಣಾ ಘಟಕ'ವನ್ನು ಕಟ್ಟೋಣ. ರಾಜ್ಯದಲ್ಲಿ 'ವಿಪತ್ತು ನಿರ್ವಹಣಾ ವೇದಿಕೆ'ಯೊಂದನ್ನು ನಿರ್ಮಿಸೋಣ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಕ್ಕೆ ಕೊಡುಗೆ ನೀಡಲು ಕೊಟ್ಟಿರುವ ಒಂದು ಅಪರೂಪದ ಅವಕಾಶವನ್ನು ತಪ್ಪದೇ ಬಳಸಿಕೊಳ್ಳೋಣ.

ಜೈವಂತ ಪಟಗಾರ
ಯೋಜನಾಧಿಕಾರಿ
ರಾಷ್ಟ್ರೀಯ ವಿಪತ್ತು ನಿರ್ವಹಣೆ ಮತ್ತು 
ಪಶ್ಚಿಮ ಘಟ್ಟ ಅಧ್ಯಯನ ವಿಭಾಗ
ಕೇಂದ್ರ ಕಚೇರಿ, ಧರ್ಮಸ್ಥಳ. 
9686527633

 

Comments