ಕೋಲಾರ: ಆಹಾರ ಧಾನ್ಯಗಳ ಕಿಟ್ ವಿತರಣೆ

 ತಾಲೂಕಿನ ಕಟಾರಿಪಾಳ್ಯದ ಸಂತ್ರಸ್ಥ ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೂಲಕ ಧವಸಧಾನ್ಯಗಳ ಕಿಟ್ ವಿತರಿಸಲಾಯಿತು. ಕಳೆದ ಆರು ತಿಂಗಳ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ರಸ್ತೆ ರಿಪೇರಿ ಕೆಲಸಕ್ಕೆಂದು ಬಂದು ವಾಸವಾಗಿರುವ ಈ ಕುಟುಂಬಗಳು ಲಾಕ್‌ಡೌನ್ ಪರಿಣಾಮ ಕೆಲಸವಿಲ್ಲದೇ ತೊಂದರೆಗೆ ಸಿಲುಕಿದ್ದವು. ಶೆಡ್‌ಗಳಲ್ಲಿ ವಾಸವಾಗಿರುವ ಈ ಕುಟುಂಬಗಳು ಕೆಲಸವಿಲ್ಲದ ಕಾರಣ ಕೈಯಲ್ಲಿ ಹಣವಿಲ್ಲದೇ, ಅಡುಗೆ ಮಾಡಿ ಉಣ್ಣೋಣವೆಂದರೆ ಮನೆಯಲ್ಲಿ ಧಾನ್ಯಗಳಿಲ್ಲದೇ ಸಂಕಟ ಅನುಭವಿಸುತ್ತಿದ್ದವು. ಯಾರಾದರೂ ಬಂದು ಊಟ ಪೂರೈಸಿ ಉಪಕಾರ ಮಾಡಬಹುದೇ ಎಂದು ಎದುರು ನೋಡುತ್ತಿದ್ದ ಈ ಕುಟುಂಬಗಳ ಸಮಸ್ಯೆಯನ್ನು ಸಕಾಲದಲ್ಲಿ ಗುರುತಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಸಂತ್ರಸ್ಥರ ಪರಿಸ್ಥಿತಿಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಡಾ. ಎಲ್ ಎಚ್ ಮಂಜುನಾಥ್ ಅವರ ಗಮನಕ್ಕೆ ತಂದಾಗ ತಕ್ಷಣವೇ ಪ್ರತಿ ಕುಟುಂಬಕ್ಕೆ ಹದಿನೈದು ದಿನಗಳಿಗೆ ಅಗತ್ಯವಿರುವ ದವಸ ಧಾನ್ಯಗಳು ಹಾಗೂ ಅಗತ್ಯ ವಸ್ತುಗಳ ಕಿಟ್ ಪೂರೈಸಲು ಹಣ ಮಂಜೂರು ಮಾಡಿದ್ದಾರೆ. ಯಾದಗಿರಿ, ಗದಗ, ಕಲ್ಬುರ್ಗಿ ಭಾಗಗಳಿಂದ ಕೂಲಿ ಕೆಲಸಕ್ಕೆಂದು ತೆರಳಿದ್ದ ಪ್ರತೀ ಕುಟುಂಬದ ಸದಸ್ಯರೊಡನೆ ಚರ್ಚಿಸಿ ಆ ಕುಟುಂಬದವರು ಅಪೇಕ್ಷಿಸಿದ ಆಹಾರ ಧಾನ್ಯಗಳು ಹಾಗೂ ವಸ್ತುಗಳನ್ನೇ ಯೋಜನೆಯ ಕಾರ್ಯಕರ್ತರು ಮನೆ ಬಾಗಿಲಿಗೆ ತೆರಳಿ ವಿತರಿಸಿದ್ದಾರೆ. ತೀರಾ ಕಷ್ಟದಲ್ಲಿರುವ ಒಟ್ಟು ಇಪ್ಪತ್ತೊಂದು ಕುಟುಂಬಗಳಿಗೆ ಸೌಲಭ್ಯ ಒದಗಿಸಲಾಗಿದೆ. 
ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ ಎಮ್, ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ಸಮನ್ವಯಾಧಿಕಾರಿ ಶಿವಕುಮಾರ, ಸ್ಥಳೀಯ ಒಕ್ಕೂಟದ ಅಧ್ಯಕ್ಷರಾದ ಜ್ಯೋತಿ, ಮಾಜಿ ಅಧ್ಯಕ್ಷರಾದ ಅನಿತಾ ಸಿಂಗ್, ಜನಜಾಗೃತಿ ವೇದಿಕೆಯ ಸದಸ್ಯರಾದ ನಂಜುAಡ ಶೆಟ್ಟಿ, ಸೇವಾಪ್ರತಿನಿಧಿಗಳಾದ ಆಶಾ ಹಾಗೂ ಆಶಾರಾಣಿ ಇವರು ಮನೆ ಮನೆಗೆ ತೆರಳಿ ಸಂತ್ರಸ್ಥರ ಸಮಸ್ಯೆಯನ್ನು ಆಲಿಸಿ ಯೋಜನೆಯಿಂದ ನೆರವು ಕೊಡಿಸಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 













Comments