ಕೋಲಾರ: ಕಲ್ಲು ಒಡೆಯುವ ಕಾರ್ಮಿಕ ಕುಟುಂಬಗಳಿಗೆ ನೆರವು
ಕೋಲಾರ ತಾಲೂಕಿನ ಕೆಂದಟ್ಟಿ ಹಳ್ಳಿಯಲ್ಲಿ ಹೊರರಾಜ್ಯದಿಂದ ಕೂಲಿ ಕೆಲಸಕ್ಕೆಂದು ಬಂದು ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಎಂಟು ಕುಟುಂಬಗಳು ನೆರವಿನ ಅಪೇಕ್ಷೆಯಲ್ಲಿವೆ ಎನ್ನುವ ಸುದ್ದಿ ಸ್ಥಳೀಯರಿಂದ ತಲುಪಿದಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡಲೇ ಸ್ಪಂದಿಸಿದೆ. ಸಂತ್ರಸ್ತ ಕುಟುಂಬಗಳಿಗೆ ಆಹಾರದ ಕಿಟ್ ಒದಗಿಸಿ ಲಾಕ್‌ಡೌನ್ ಸಮಯದ ಕೆಲವು ದಿನಗಳ ಹಸಿವಿನ ಸಮಸ್ಯೆ ನೀಗಿಸಲಾಗಿದೆ.
ತಾಲೂಕಿನ ಪುರಹಳ್ಳಿ ಗ್ರಾಮದಲ್ಲಿ ಅಂದು ಕೆಲಸ ಮಾಡಿ ಅಂದೇ ಊಟ ಮಾಡುವ ಅನಿವಾರ್ಯತೆಯಲ್ಲಿರುವ ಅನೇಕ ಕುಟುಂಬಗಳಿವೆ. ಆ ಕುಟುಂಬಗಳೂ ಕೆಲಸವಿಲ್ಲದೇ ತೊಂದರೆಗೆ ಒಳಗಾಗಿದ್ದವು. ಹಲವು ಕುಟುಂಬಗಳು ಹೇಗೋ ಸಾವರಿಸಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದವು. ಆದರೆ ಇಪ್ಪತ್ತು ಕುಟುಂಬಗಳು ಮಾತ್ರ ಮನೆಯಲ್ಲಿ ದಿನಸಿ ವಸ್ತುಗಳಿಲ್ಲದೇ ತೀರಾ ತೊಂದರೆಯಲ್ಲಿದ್ದವು. ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದ ಈ ಕುಟುಂಬದ ಸದಸ್ಯರು ಕೆಲಸವಿಲ್ಲದೇ ಹಸಿದಿದ್ದರು. ಇದನ್ನು ಗುರುತಿಸಿದ ಸ್ಥಳೀಯರು ಸಮಸ್ಯೆಯ ರೂಪವನ್ನು ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಕೂಡಲೇ ಸ್ಪಂದಿಸಿದ ಯೋಜನೆ ಆ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಒದಗಿಸಿ ಸಮಸ್ಯೆಗೆ ಸ್ಪಂದನೆ ನೀಡಿದೆ.
ಕಿಟ್ ವಿತರಣೆಯನ್ನು ಜಿಲ್ಲಾ ದಲಿತ ಸಂಘಟನಾ ಕಾರ್ಯದರ್ಶಿ ಶ್ರೀ ಯಲ್ಲಪ್ಪ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಶ್ರೀ ಮುನಿರಾಜು, ಒಕ್ಕೂಟದ ಅಧ್ಯಕ್ಷರಾದ ಶ್ರೀ ಗಂಗಪ್ಪ, ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ನಂಜುಡಪ್ಪ ಶೆಟ್ಟಿ ಅವರು ನೆರವೇರಿಸಿದರು. ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಮಂಜುನಾಥ ನಾಗರಾಳ, ಶ್ರೀಮತಿ ಅರುಣಮ್ಮ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಮಂಜುಳಾ, ಸೇವಾಪ್ರತಿನಿಧಿ ಶ್ರೀಮತಿ ಕಾಮಾಕ್ಷಿ ಉಪಸ್ಥಿತರಿದ್ದರು.
Comments
Post a Comment