ಸೇವಾಪ್ರತಿನಿಧಿಯಿಂದ ಉಚಿತವಾಗಿ ಮಾಸ್ಕ್ ವಿತರಣೆ



ಕೋಲಾರ: '
ಲಾಕ್ ಡೌನ್ ಸಮಯದಲ್ಲಿ ಸ್ವ ರಕ್ಷಣೆಗೆ ಪ್ರತಿಯೊಬ್ಬರೂ ವಿಶೇಷ ಗಮನ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಬೇಕು. ತನ್ಮೂಲಕ ನಿರೋಗಿಯಾಗಿರಬೇಕು'. ಆರೋಗ್ಯ ಇಲಾಖೆ ನೀಡಿರುವ ಈ ಮಾಹಿತಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎನ್ನುವ ನಿಟ್ಟಿನಲ್ಲಿ, ಈ ಆರೋಗ್ಯಕರ ಸಂದೇಶವನ್ನು ಸಮುದಾಯಕ್ಕೆ ತಲುಪಿಸಲು ಹಲವರು ಕಾರ್ಯಪ್ರವೃತ್ತರಾಗಿದ್ದಾರೆ. 

ಮಾಸ್ಕ್ ಗಳನ್ನು ಧರಿಸುವ ಬಗ್ಗೆ ಮಾಹಿತಿ ನೀಡಿ ತಾವು ಆರೋಗ್ಯವಾಗಿರುವುದಲ್ಲದೇ ಇತರರಿಗೂ ತೊಂದರೆ ಉಂಟಾಗಬಾರದು ಎನ್ನುವ ಮಹದುದ್ದೇಶ ಈ ಅರಿವು ಮೂಡಿಸುವ ಕಾರ್ಯಕ್ರಮದ ಹಿಂದಿದೆ. ಹೀಗೆ ಜಾಗೃತಿ ಮೂಡಿಸುತ್ತಿರುವ  ಹಲವರಲ್ಲಿ ಕೋಲಾರ ತಾಲೂಕಿನ ಅನಿತಾ ಅವರೂ ಒಬ್ಬರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿಯಾಗಿರುವ ಇವರು ಕೋಲಾರ ತಾಲೂಕಿನ ಕಸಬಾ ವಲಯದ ಕೋಟೆ ಕಾರ್ಯಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾನು ಸಮುದಾಯಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ನಿರ್ಧರಿಸಿದ ಅನಿತಾ, ತಮ್ಮ ಬಿಡುವಿನ ವೇಳೆಯಲ್ಲಿ ಮಾಸ್ಕ್ ಗಳನ್ನು ಹೊಲಿದು ಉಚಿತವಾಗಿ ಹಂಚುತ್ತಿದ್ದಾರೆ. 

ಕರ್ತವ್ಯಕ್ಕೆ ತೆರಳುವಾಗ ತಾವು ತಯಾರಿಸಿದ ಮಾಸ್ಕ್ ಗಳನ್ನು ತಮ್ಮ ಬ್ಯಾಗ್ ನಲ್ಲಿ ಇಟ್ಟುಕೊಂಡು ತೆರಳುವ ಇವರು  ಮಾಸ್ಕ್ ಗಳನ್ನು ಧರಿಸದ ಯಾವುದಾದರೂ ವ್ಯಕ್ತಿಗಳು ಕಂಡುಬಂದರೆ ಅವರನ್ನು ಸಮೀಪಿಸಿ ವಿತರಿಸುತ್ತಾರೆ. ಜೊತೆಗೆ ಮಾಸ್ಕ್ ಧರಿಸಬೇಕಾದ ಅನಿವಾರ್ಯತೆಯ ಬಗ್ಗೆ ಅವರಿಗೆ ತಿಳಿ ಹೇಳುತ್ತಾರೆ.
 

ತಮ್ಮ ಮನೆಯ ಓಣಿಯಲ್ಲಿ ತರಕಾರಿ ಮಾರಲು ಬರುವವರು ಮಾಸ್ಕ್ ಧರಿಸಿರದಿದ್ದರೆ, ಹಾಲು ನೀಡಲು ಬರುವರು ಮುಖಗವಸು ಮರೆತು ಬಂದಿದ್ದರೆ, ಪೇಪರ್ ಹಾಕಲು ಬರುವವರು ನಿರ್ಲಕ್ಷ್ಯ ತೋರಿದ್ದರೆ, ಪಾತ್ರೆ ಮಾರಲು ಬರುವವರು ಮುಖಗವಸು ರಹಿತವಾಗಿ ಓಡಾಡುತ್ತಿದ್ದರೆ ಅವರಿಗೆಲ್ಲಾ ವಿತರಿಸುತ್ತಿದ್ದಾರೆ. 

ಗುಣಮಟ್ಟದ ಮಾಸ್ಕ್ ಗಳನ್ನು ಸ್ವತಃ ತಾವೇ ತಯಾರಿಸಿ ವಿತರಿಸುತ್ತಿರುವುದು ವಿಶೇಷ. ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ನಗದು ಸಂಗ್ರಹಣಾ ಕೇಂದ್ರಗಳಿಗೆ ಹಣ ಜಮೆ ಮಾಡಲು ಬರುವವರಿಗೆ ಮಾಸ್ಕ್ ಗಳನ್ನು ವಿತರಿಸಿ ಅದನ್ನು ಧರಿಸುವ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. 

ಉಚಿತವಾಗಿ ಮಾಸ್ಕ್ ವಿತರಿಸಿ, ಬಳಕೆಯ ಬಗ್ಗೆ ಪ್ರೇರಣೆ ನೀಡುತ್ತಿರುವ ಇವರ ಕಾರ್ಯ ಮಾದರಿಯೇ ಸರಿ.

ಕೋಡಕಣಿ ಜೈವಂತ ಪಟಗಾರ

Comments