ಕೋಲಾರದಲ್ಲೊಂದು ಮಾಸ್ಕ್ ವಿತರಣೆ ಅಭಿಯಾನ
ಮಾಸ್ಕ್ ಧರಿಸುವಿಕೆಯಿಂದ ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯಲು ಸಾಧ್ಯವಿದೆ. ಹೀಗಾಗಿಯೇ ಮಾಸ್ಕ್ ಧರಿಸುವಿಕೆ ಕಡ್ಡಾಯವೆಂದು ಸರ್ಕಾರ ಘೋಷಿಸಿದೆ. ಮಾಸ್ಕ್ ಧರಿಸುವಿಕೆಯ ಉಪಯುಕ್ತತೆಯ ಬಗ್ಗೆ ಅರಿವಿಲ್ಲದೇ ಇರುವವರು ಮಾಸ್ಕ್ ರಹಿತವಾಗಿ ಸಂಚರಿಸುವುದು ಅಲ್ಲಲ್ಲಿ ಗೋಚರಿಸುತ್ತದೆ. ಹೀಗೆ ಓಡಾಡುವವರನ್ನು ಗುರುತಿಸಿ ಸ್ಥಳೀಯ ಆಡಳಿತ ದಂಡ ಪ್ರಯೋಗ ಮಾಡುವುದೂ ನಡೆದಿದೆ. ಮಾಸ್ಕ್ ಧರಿಸುವ ವಿಷಯವಾಗಿ ಕೋಲಾರ ತಾಲ್ಲೂಕಿನಲ್ಲಿ ಮಾದರಿ ಕಾರ್ಯವೊಂದು ನಡೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಹಲವು ಮಹಿಳೆಯರು ಯೋಜನೆಯ ಕಾರ್ಯಕರ್ತರು ನೀಡಿದ ಪ್ರೇರಣೆಯಿಂದ ಮಾಸ್ಕ್ಗಳನ್ನು ಹೊಲಿದು ತಮ್ಮ ಸುತ್ತಮುತ್ತಲಿನವರಿಗೆ ಉಚಿತವಾಗಿ ಹಂಚುವ ಹಾಗೂ ಧರಿಸುವಿಕೆಯ ಕುರಿತಾಗಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಪ್ರೇರಣೆಯೇನು?
ಕೋಲಾರ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿಯೂ ಗುಣಮಟ್ಟದ ಉಚಿತ ಮಾಸ್ಕ್ ವಿತರಣೆಯ ಪ್ರಯತ್ನಗಳಾಗುತ್ತಿವೆ. ಆರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ಶಶಿಕಲಾ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಮಂಜುಳಾ ಅವರು ತಮ್ಮ ಬಿಡುವಿನ ವೇಳೆಯಲ್ಲಿ ತಲಾ ನೂರಕ್ಕೂ ಅಧಿಕ ಮಾಸ್ಕ್ಗಳನ್ನು ತಯಾರಿಸಿ ಅಗತ್ಯವಿರುವವರಿಗೆ ಹಂಚಿದ್ದರು. ಇವರುಗಳಿಂದ ಸ್ಫೂರ್ತಿ ಪಡೆದ ಕೆಲವು ಸೇವಾಪ್ರತಿನಿಧಿಗಳು ತಮ್ಮ ಮನೆಯಲ್ಲಿರುವ ಹೊಲಿಗೆ ಯಂತ್ರದಿAದ ಮಾಸ್ಕ್ಗಳನ್ನು ತಯಾರಿಸಿ ಉಚಿತವಾಗಿ ವಿತರಿಸಿದ್ದರು. ಮಾಸ್ಕ್ಗಳನ್ನು ವಿತರಿಸುವುದರ ಜತೆಗೆ ಅದರ ಬಳಕೆಯ ಅಗತ್ಯತೆ, ಅನಿವಾರ್ಯತೆಗಳ ಬಗ್ಗೆ ಅರಿವು ಮೂಡಿಸಿದ್ದರು. ಪರಿಣಾಮ ಟೈಲರಿಂಗ್ ಗೊತ್ತಿರುವ ಸ್ವಸಹಾಯ ಸಂಘಗಳ ಸದಸ್ಯರು ಸಹ ಸ್ವಯಂಸ್ಫೂರ್ತಿಯಿAದ ೧೦ ರಿಂದ ೧೫ ಮಾಸ್ಕ್ಗಳನ್ನು ಹೊಲಿದು ತಮ್ಮ ಸುತ್ತಮುತ್ತಲಿನವರಿಗೆ ವಿತರಿಸಿದ್ದಾರೆ.
ಒಬ್ಬರ ಕಾರ್ಯ ಇನ್ನೊಬ್ಬರಿಗೆ ಮಾದರಿಯಾಗಿ ಇದರ ಬಲದಿಂದ ಇದುವರೆಗೆ ನೂರೈವತ್ತಕ್ಕೂ ಅಧಿಕ ಮಹಿಳೆಯರು ತಲಾ ಹತ್ತರಿಂದ ಇಪ್ಪತ್ತು ಮಾಸ್ಕ್ಗಳನ್ನು ಹೊಲಿದು ವಿತರಿಸಿದ್ದಾರೆ. ಇವರ ಕಾರ್ಯ ಇನ್ನಷ್ಟು ಜನರಿಗೆ ಸ್ಫೂರ್ತಿ ತುಂಬಿದೆ. ಮತ್ತಷ್ಟು ಜನ ಸ್ವಯಂ ಸ್ಫೂರ್ತಿಯಿಂದ ಮಾಸ್ಕ್ ಹೊಲಿದು ವಿತರಿಸಲು ಮುಂದೆ ಬರುತ್ತಿದ್ದಾರೆ ಎನ್ನುತ್ತಾರೆ ತಾಲೂಕಿನ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್.
ಸ್ವಸಹಾಯ ಸಂಘದ ಸದಸ್ಯರಾದ ಕೀಲುಕೋಟೆಯ ಶೀಲಾ, ಕೋಲಾರ ನಗರದ ನಿವಾಸಿ ಅನಿತಾ ಅವರು ತಲಾ ಮೂವತ್ತಕ್ಕೂ ಅಧಿಕ ಮಾಸ್ಕ್ಗಳನ್ನು ತಯಾರಿಸಿ ವಿತರಿಸಿದ್ದಾರೆ. ಗಂಗಮ್ಮನ ಪಾಳ್ಯ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶಿಲ್ಪಶ್ರೀ ಸ್ವಂತ ಖರ್ಚಿನಲ್ಲಿ ನೂರಕ್ಕೂ ಅಧಿಕ ಮಾಸ್ಕ್ ತಯಾರಿಸಿ ವಿತರಿಸಿದ್ದಾರೆ. ಯೋಜನೆಯ ಕಾರ್ಯಕರ್ತರ ಸೇವಾ ಕಾರ್ಯವನ್ನು ಗಮನಿಸಿದ ಯಲವಾರ ಗ್ರಾಮದ ಮುಖಂಡರಾದ ಶ್ರೀ ರಾಜಕುಮಾರ್ ಅವರು ತಮ್ಮ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನ ನಗದು ಸಂಗ್ರಹಣಾ ಕೇಂದ್ರದಲ್ಲಿ ಹಣ ಜಮೆ ಮಾಡಲು ಬಂದಿರುವ ಸ್ವಸಹಾಯ ಸಂಘಗಳ ಸದಸ್ಯರಿಗೆ ಉಚಿತವಾಗಿ ಮಾಸ್ಕ್ಗಳನ್ನು ವಿತರಿಸಿದ್ದಾರೆ. ಯಲವಾರ ಗ್ರಾಮದಲ್ಲಿ ಎಪ್ಪತೈದು ಸ್ವ ಸಹಾಯ ಸಂಘಗಳಿವೆ. ಅಲ್ಲಿ ವಾರಕ್ಕೊಮ್ಮೆ ಹಣ ಸಂಗ್ರಹಣೆ ನಡೆಯುತ್ತದೆ. ಹಣ ಸಂಗ್ರಹಣೆಗೆ ಬಂದಿರುವ ಎಲ್ಲಾ ಸಂಘಗಳ ಸದಸ್ಯರಿಗೆ ಕೋವಿಡ್೧೯ ವೈರಸ್‌ನಿಂದ ರಕ್ಷಿಸಿಕೊಳ್ಳುವುದರ ಜಾಗೃತಿ ಮೂಡಿಸುವುದರೊಂದಿಗೆ ಮಾಸ್ಕ್ಗಳನ್ನೂ ರಾಜ್ ಕುಮಾರ್ ವಿತರಿಸಿ ಮಾದರಿಯೊಂದನ್ನು ಹುಟ್ಟುಹಾಕಿದ್ದಾರೆ. ಮಾಸ್ಕ್ ನೀಡುವುದರ ಜೊತೆಗೆ ಮಾಸ್ಕ್ ಬಳಕೆಯ ವಿಧಾನ, ಮರುಬಳಕೆ ಹಾಗೂ ವಿಲೇವಾರಿಯ ಬಗ್ಗೆಯೂ ಸಾರ್ವಜನಿಕರಿಗೆ ಅವರು ಮಾಹಿತಿ ನೀಡುತ್ತಿದ್ದಾರೆ.
ಮಾಸ್ಕ್ ಏಕೆ ಧರಿಸಬೇಕು?
ಮಾಸ್ಕ್ ಧರಿಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ತಾಲೂಕಿನಾದ್ಯಂತ ನಡೆಯುತ್ತಿದೆ. ಸಾರ್ವಜನಿಕವಾಗಿ ಕೆಮ್ಮುವುದು, ಸೀನುವುದು ಹಾಗೂ ಉಗುಳುವುದು ಸಮುದಾಯಕ್ಕೆ ಮಾರಕ. ದಿನಸಿ ಅಂಗಡಿಗಳು, ಸೂಪರ್ ಮಾರ್ಕೆಟ್‌ಗಳು, ಪೆಟ್ರೋಲ್‌ಬಂಕ್‌ಗಳು, ಪ್ರಮುಖ ವೃತ್ತಗಳು, ಕೂಡು ರಸ್ತೆಗಳು ಮತ್ತಿತರ ಜನದಟ್ಟಣೆ ಇರುವ ಸ್ಥಳಗಳಿಗೆ ತೆರಳುವುದಾದÀಲ್ಲಿ ಮಾಸ್ಕ್ ಧರಿಸಿಯೇ ತೆರಳಬೇಕು. ಧರಿಸುವ ಮಾಸ್ಕ್ನಿಂದ ಬಾಯಿ ಹಾಗೂ ಮೂಗನ್ನು ಮೆಚ್ಚುವಂತಿರಬೇಕು. ಕೆಮ್ಮಿದರೆ ಅಥವಾ ಸೀನಿದರೆ ಬಾಯಿ ಅಥವಾ ಮೂಗಿನಿಂದ ದ್ರವದ ಹನಿ ಹೊರ ಹೋಗದಂತೆ ತಡೆಯಬಲ್ಲ ಮಾಸ್ಕ್ಗಳನ್ನು ಧರಿಸಿರಬೇಕು ಹೀಗೆ ಹಲವು ವಿಷಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.
ಕಳಪೆ ಮಾಸ್ಕ್ಗಳನ್ನು ಖರೀದಿಸದೇ ಇರುವುದು. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಮಾರಾಟ ಮಾಡುತ್ತಿರುವವರಲ್ಲಿ ಮಾಸ್ಕ್ ಕೊಂಡುಕೊಳ್ಳದಿರುವುದು. ಕೆಮ್ಮುವುದು, ಸೀನುವುದು, ಉಸಿರಾಟದ ತೊಂದರೆ, ಜ್ವರ ಮುಂತಾದ ಲಕ್ಷಣಗಳನ್ನು ಹೊಂದಿರುವವರೊಂದಿಗೆ ಮಾತನಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇತ್ಯಾದಿಗಳ ಬಗ್ಗೆ ಅರಿವನ್ನೂ ಮೂಡಿಸಲಾಗುತ್ತಿದೆ.
ಮಾಸ್ಕ್ ತಯಾರಿಗೆ ಸ್ವಯಂ ಪ್ರೇರಣೆ:
ಮಾಸ್ಕ್ ಧರಿಸುವುದರಿಂದ ಕೊರೋನ ಸೋಂಕಿಗೆ ಸುಲಭವಾಗಿ ತುತ್ತಾಗುವುದು ತಪ್ಪುತ್ತದೆ. ಕೋವಿಡ್೧೯ನಿಂದ ರಕ್ಷಣೆಗೆ ಮಾಸ್ಕ್ ಧರಿಸುವುದು ಉತ್ತಮ ಮಾರ್ಗ ಎನ್ನುವುದನ್ನು ಮನಗಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಹಲವು ಸದಸ್ಯರು ಸ್ವಯಂ ಪ್ರೇರಣೆಯಿಂದ ಮಾಸ್ಕ್ ಹೊಲಿದು ವಿತರಿಸುತ್ತಿದ್ದಾರೆ. ಯೋಜನೆಯಿಂದ ಟೈಲರಿಂಗ್ ತರಬೇತಿ ಪಡೆದುಕೊಂಡವರು, ಹೊಲಿಗೆಯಂತ್ರ ಖರೀದಿಗೆಂದು ಆರ್ಥಿಕ ನೆರವು ಪಡೆದವರು, ಟೈಲರಿಂಗ್ ಘಟಕ ನಿರ್ಮಾಣಕ್ಕೆ ಹಣಕಾಸಿನ ಸೌಲಭ್ಯ ಪಡೆದುಕೊಂಡವರು ಸ್ವಯಂಪ್ರೇರಣೆಯಿAದ ಮಾಸ್ಕ್ಗಳನ್ನು ಹೊಲಿದು ತಮ್ಮ ಸುತ್ತಮುತ್ತಲಿನ ಕುಟುಂಬಗಳಿಗೆ ವಿತರಿಸುತ್ತಿದ್ದಾರೆ. ನೂರಕ್ಕೂ ಅಧಿಕ ಮಹಿಳೆಯರು ಮಾಸ್ಕ್ ತಯಾರಿಗೆ ಸ್ವಯಂಪ್ರೇರಣೆಯಿAದ ತೊಡಗಿಕೊಂಡಿದ್ದು ಇವರಿಗೆ ವಲಯ ಮೇಲ್ವಿಚಾರಕರು, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಹಾಗೂ ಸೇವಾ ಪ್ರತಿನಿಧಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ.
ಮಾಸ್ಕ್ ಹೊಲಿಯುವಾಗ ಹೊಸದಾಗಿರುವ ಬಟ್ಟೆಗಳನ್ನು ಬಳಸುವುದು. ಸ್ಯಾನಿಟೈಸರ್ ಅಥವಾ ಡೆಟ್ಟಾಲ್ ದ್ರಾವಣದಿಂದ ಕೈ ತೊಳೆದುಕೊಂಡು ಹೊಲಿಗೆ ಆರಂಭಿಸುವುದು. ಸಿದ್ಧಪಡಿಸಿರುವ ಮಾಸ್ಕ್ಗಳನ್ನು ಸುರಕ್ಷಿತ ಸ್ಥಳದಲ್ಲಿ ಸಂಗ್ರಹಿಸುವುದು. ಸಿದ್ಧಪಡಿಸಿದ ಮಾಸ್ಕ್ಗಳನ್ನು ಬೇರೆಯವರು ಸ್ಪರ್ಶಿಸದಂತೆ ನೋಡಿಕೊಳ್ಳುವುದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ಗಳನ್ನು ವಿತರಿಸುವುದು. ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಯೋಜನೆ ಸಿಬ್ಬಂದಿಗಳು ನೀಡುತ್ತಿದ್ದಾರೆ.
ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ನಿರ್ಣಯಕ್ಕೆ ಹಲವು ಜಿಲ್ಲಾಡಳಿತಗಳು ಬಂದಿವೆ. ಅಲ್ಲದೆ ಮಾಸ್ಕ್ ಧರಿಸದೇ ಸಂಚರಿಸುವುದನ್ನು ನಿಷೇಧಿಸಿ ನಿಯಮ ಉಲ್ಲಂಘಿಸಿದವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನು ತಾಲ್ಲೂಕು ಆಡಳಿತಕ್ಕೆ ನೀಡಿವೆ. ಪರಿಸ್ಥಿತಿ ಹೀಗಿರುವಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಸ್ವಯಂ ಪ್ರೇರಣೆಯಿಂದ ತಾವು ಮಾಸ್ಕ್ ಧರಿಸುವುದಲ್ಲದೇ ಇತರರಿಗೂ ಮಾಸ್ಕ್ ಧರಿಸುವಂತೆ ಪ್ರೇರಣೆ ನೀಡುತ್ತಿರುವುದು ಮಾದರಿಯೇ ಸರಿ.
Comments
Post a Comment