ಶಕ್ತಿ ಮತ್ತು ಯುಕ್ತಿಯ ಸಮನ್ವಯತೆಯೇ ವಿಪತ್ತು ನಿರ್ವಹಣೆಯ ಗುರಿ ಆಗಿರಬೇಕು...

ಬೆಳ್ತಂಗಡಿ: ವಿಪತ್ತು ನಿರ್ವಹಣೆ ಸಂಯೋಜಕರ ಒಂದು ದಿನದ ತರಬೇತಿ ಕಾರ್ಯಾಗಾರ ಇಂದು ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿಯಲ್ಲಿ ನಡೆಯಿತು. ತರಬೇತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ಅನೀಲ್ ಕುಮಾರ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿ ಪ್ರಾಕೃತಿಕ ದುರಂತಗಳು ಒಂದಲ್ಲಾ ಒಂದು ರೀತಿಯಲ್ಲಿ ನಮಗೆ ಅನುಭವಕ್ಕೆ ಬಂದಿರುತ್ತದೆ. ಕಳೆದ ವರ್ಷ ಸಮೀಪದ ಚಾರ್ಮಾಡಿಯಲ್ಲಿ ಗುಡ್ಡ ಕುಸಿತದಿಂದ ಉಂಟಾದ ಸಮಸ್ಯೆಯನ್ನು ನಾವು ನೋಡಿದ್ದೇವೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಅತಿವೃಷ್ಠಿಯಿಂದ ತೊಂದರೆಗೆ ಒಳಗಾದ ಘಟನೆಗಳನ್ನು ನಾವು ಗಮನಿಸಿದ್ದೇವೆ. ವಿಕೋಪದ ಕಾರಣದಿಂದಾಗಿ ಅನೇಕ ಕುಟುಂಬಗಳು ತಮ್ಮ ಮನೆಯನ್ನು ಕಳೆದುಕೊಂಡವು. ಹತ್ತಾರು ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಕೃಷಿಯನ್ನು ಕಳೆದುಕೊಂಡರು. ಇನ್ನು ಮುಂದಿನ ದಿನಗಳಲ್ಲಿ ಈ ಹಿಂದಿನ ಸಮಸ್ಯೆಗಳಿಗಿಂತ  ಅಧಿಕ ಹಾನಿಯಾಗುವ ಸಂಭವಗಳಿವೆ. 

ಪ್ರಾಕೃತಿಕ ದುರಂತಗಳ ಸಮಯ ದೂರದಲ್ಲಿರುವ ಎನ್.ಡಿ.ಆರ್.ಎಫ್ ತಂಡವು ಬರುವ ವರೆಗೆ ಕಾಯ್ದುಕುಳಿತುಕೊಳ್ಳುವ ಬದಲು ಸ್ಥಳೀಯವಾಗಿ ಸಂಘಟಿತರಾಗಿರುವ ವಿಪತ್ತು ನಿರ್ವಹಣೆಯ ತಂಡವಿದ್ದರೆ ಅನೇಕ ತೊಂದರೆಗಳು ತಪ್ಪುತ್ತವೆ. ಈ ಉದ್ದೇಶದಿಂದ ಪೂಜ್ಯರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮ ಘೋಷಿಸಿದ್ದಾರೆ. ಈ ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಡಾ.ಎಲ್.ಎಚ್. ಮಂಜುನಾಥ್ ಅವರು ಸಮಗ್ರ ಚಿಂತನೆ ನಡೆಸಿ ದಾರ್ಶನಿಕವಾಗಿ ಅನುಷ್ಠಾನ ಮಾಡುವ ಯೋಜನೆಯನ್ನು ರೂಪಿಸಿದ್ದಾರೆ ಎಂದರು. 

ದೂರದೃಷ್ಠಿ ಯೋಜನೆಯಾದ ಈ ಕಾರ್ಯಕ್ರಮ ಜನರಿಗೆ ತಲುಪುವಂತಾಗಬೇಕು ಕೆಲವು ಸಂದರ್ಭಗಳಲ್ಲಿ ಅಜ್ಞಾನದಿಂದಲೇ ದೊಡ್ಡ ವಿಪತ್ತು ಸಂಭವಿಸಬಹುದು. ಸಣ್ಣ ಮಾತಿನ ವ್ಯಥ್ಯಯದಿಂದ ಕಾಲ್ತುಳಿತ ದಂತಹ ಸಮಸ್ಯೆ ಉಂಟಾಗಿ ವಿಪತ್ತು ಎದುರಾಗಬಹುದು. ಇಂತಹ ಸಂದರ್ಭ ಸಮಸ್ಯೆಯನ್ನು ಮಣಿಸಲು ಯುಕ್ತಿಯನ್ನು ಬಳಸಬೇಕಾಗುತ್ತದೆ. ಯುಕ್ತಿ ಹಾಗೂ ಶಕ್ತಿಯಿಂದ ವಿಪತ್ತನ್ನು ಬಗೆಹರಿಸುವ ಚಾಕಚಕ್ಯತೆಯನ್ನು ಸ್ವಯಂಸೇವಕರು ರೂಢಿಸಿಕೊಳ್ಳಬೇಕು. 

ಪೂಜ್ಯರ ಬಗ್ಗೆ ಅಭಿಮಾನ ಹೊಂದಿರುವವರು ಖಂಡಿತವಾಗಿ ಸೇವಾ ಮನೋಭಾವನೆ ಹೊಂದಿರುತ್ತಾರೆ. ಅಂತಹವರನ್ನು ಗುರುತಿಸಬೇಕು. ಸಂಯೋಜಕರು ಸ್ವಯಂಸೇವಕರ  ಪರಿಚಯ ಹೊಂದಿರಬೇಕು. ಆಗಾಗ ಅವರೊಂದಿಗೆ ಮಾತಿಗೆ ಸಿಗುತ್ತಿರಬೇಕು. ಅವರನ್ನು ವಿಶ್ವಾಸಪೂರ್ಣವಾಗಿ ಕಾಣಬೇಕು. ಅವರಲ್ಲಿನ ಮಾನಸಿಕ ಬಲ, ಆಧ್ಯಾತ್ಮಿಕ ಬಲವನ್ನು ಗುರುತಿಸಬೇಕು. ಯಾವ ದುರಂತಗಳನ್ನು ನಿರ್ವಹಿಸುವಾಗ ಯಾವ ಬಲವನ್ನು ಬಳಸಬೇಕು ಎನ್ನುವ ಬಗ್ಗೆ ಮಾಹಿತಿಯನ್ನು ಸ್ವಯಂಸೇವಕರು ಹೊಂದಿರಬೇಕು. ವಿದ್ಯುತ್ ಅಪಘಾತವಾದಾಗ ಯುಕ್ತಿ ಬಳಕೆ ಮಾಡಬೇಕಾಗುತ್ತದೆ. ಪ್ರವಾಹದಂತಹ ಸಂದರ್ಭ ಎದುರಿಸಲು ಶಕ್ತಿಯ ಬಳಕೆ ಮಾಡಬೇಕಾಗುತ್ತದೆ. ಶಕ್ತಿ ಮತ್ತು ಯುಕ್ತಿಯ ಸಮನ್ವಯತೆಯೇ ವಿಪತ್ತು ನಿರ್ವಹಣೆಯ ಗುರಿ ಆಗಿರಬೇಕು ಎಂದರು.

ಬೆಳ್ತಂಗಡಿ ತಾಲ್ಲೂಕಿನ ಸಂಯೋಜಕರು ಕಟ್ಟುತ್ತಿರುವ ವಿಪತ್ತು ನಿರ್ವಹಣೆ ಪಡೆ ರಾಜ್ಯಕ್ಕೆ ಮಾದರಿಯಾಗುವಂತಿರಬೇಕು. ಕಾರ್ಯಕ್ರಮದ ಯಶಸ್ಸು ನಿಂತಿರುವುದೇ ಸ್ವಯಂಸೇವಕರಿಂದ. ಹಾಗಾಗಿ ಸ್ವಯಂ ಸೇವಕರ ಆಯ್ಕೆಗೆ ಬಹಳ ಮುತುವರ್ಜಿ ವಹಿಸಬೇಕು. ಈ ಕಾರ್ಯಕ್ರಮದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ಹೆಮ್ಮೆ ಪಡಬಹುದು. ಸೂಕ್ಷ್ಮತೆಯನ್ನು ಅರಿತು ಈ ಯೋಜನೆಯ ಯಶಸ್ಸಿನಲ್ಲಿ ಕೊಡುಗೆಯನ್ನು ನೀಡಿ ಎಂದರು.

ನಂತರ ಮಾತನಾಡಿದ ಬೆಳ್ತಂಗಡಿ ತಾಲ್ಲೂಕಿನ ಯೋಜನಾಧಿಕಾರಿಗಳಾದ ಶ್ರೀ ಜಯಕರ ಶೆಟ್ಟಿ ಅವರು ವಿಪತ್ತು ನಿರ್ವಹಣೆಗೆ ಪೂಜ್ಯರು ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು. ಸ್ವತಃ ನೆರೆ ಪೀಡಿತ ಪ್ರದೇಶಗಳಿಗೆ ಧಾವಿಸಿ ಜನರ ಕಷ್ಟಗಳನ್ನು ಆಲಿಸಿ ಸಮಸ್ಯೆಗೆ ಸ್ಪಂದಿಸುವ ಪೂಜ್ಯರ ರೀತಿಯನ್ನು ವಿವರಿಸಿದರು. ಕಳೆದ ವರ್ಷದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ಘೋಷಿಸಿರುವುದು. ಬೆಳ್ತಂಗಡಿ ತಾಲ್ಲೂಕಿನಲ್ಲಿ ಸಮಸ್ಯೆಗೆ ಸಿಲುಕಿದವರಿಗೆ ಸ್ಪಂದಿಸಿರುವುದನ್ನು ತಿಳಿಸಿದರು. ಪೂಜ್ಯರ ಆಶಯದಂತೆ ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಪ್ರಯತ್ನಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕರಾದ ಶ್ರೀ ಬೂದಪ್ಪ ಗೌಡ, ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ್, ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀ ರಾಜೇಶ್ ಅವರು ಉಪಸ್ಥಿತರಿದ್ದರು.

ಬೆಳ್ತಂಗಡಿ ಹಾಗೂ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ 18 ಮಂದಿ ವಿಪತ್ತು ನಿರ್ವಹಣೆ ಸಂಯೋಜಕರು ತರಬೇತಿಯಲ್ಲಿ ಭಾಗವಹಿಸಿದ್ದರು.


Comments

  1. ಜ್ವಲಂತ ಪಾಕೃತಿಕ ವಿಕೋಪ ಸವಾಲುಗಳನ್ನು ಎದುರಿಸುವಲ್ಲಿ ಕೈ ಜೋಡಿಸುವಲ್ಲಿ ಪೂಜ್ಯರು ರೂಪಿಸಿದ ವಿಶೇಷ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ಮತ್ತು ಯೋಜನೆಯ ಅತ್ತುತ್ತಮ ಕಾರ್ಯಕ್ರಮಗಳಲ್ಲಿ ಒಂದೆಂದರೆ ತಪ್ಪಾಗದು..
    ಎಲ್ಲಾ ವಾರಿಯರ್ಸಗೂ ಶುಭವಾಗಲಿ..

    ReplyDelete
  2. BHIMPPA maryani Basveswar nava jhivana samiti Radderhatti ta athani dstike Belgavi

    ReplyDelete

Post a Comment