ದಶಕದಿಂದ ರಸ್ತೆಯಂಚಿನ ಕಸವನ್ನು ಸ್ವಯಂಸ್ಫೂರ್ತಿಯಿಂದ ಆರಿಸುತ್ತಿರುವ ಮಹಿಳೆ..
ಕಳೆದ ಶನಿವಾರ ಮುಂಜಾನೆ ಪೆರ್ಲ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದೆ. ವಾಯುವಿಹಾರದ ನಡಿಗೆಯದು. ಈ ಮಾರ್ಗದಲ್ಲಿ ಮುಂಜಾನೆಯ ನಡಿಗೆ ನಿತ್ಯ ಅಭ್ಯಾಸ. ಈ ಬಾರಿಯ ಶನಿವಾರದ ನಡಿಗೆಯಲ್ಲಿ ವಿಶೇಷ ವ್ಯಕ್ತಿಯೋರ್ವರ ಪರಿಚಯವಾಯಿತು.
ಪೆರ್ಲ ಊರಿನ ಹೆಸರಿರುವ ನಾಮಫಲಕ ಉಜಿರೆಯ ಪ್ರಹ್ಲಾದ ನಗರದ ಆರಂಭದಲ್ಲಿಯೇ ಇದೆ. ಈ ಬೋರ್ಡ್ ನಿಂದ ಆರಂಭಿಸಿದರೆ ಸರಿಸುಮಾರು ಒಂದು ಕಿಲೋ ಮೀಟರ್ ವರೆಗೆ ಯಾವುದೇ ಮನೆಗಳಿಲ್ಲ. ಆ ನಂತರ ಅಲ್ಲಲ್ಲಿ ಮನೆಗಳು ಕಾಣಸಿಗುತ್ತವೆ. ನಸು ಬೆಳಕಿನಲ್ಲಿ ಆ ರಸ್ತೆಯಲ್ಲಿ ಜನರ ಸಂಚಾರ ಕಡಿಮೆಯೇ. ಅಂದು ಮುಂಜಾನೆ ಮಾತ್ರ ಮಹಿಳೆಯೋರ್ವರು ಕೈಯಲ್ಲಿ ಕೋಲೊಂದನ್ನು ಹಿಡಿದು ರಸ್ತೆಯ ಇಕ್ಕೆಲಗಳನ್ನು ಗಮನಿಸುತ್ತಾ ಸಾಗುತ್ತಿದ್ದರು.
ಅಲ್ಲಲ್ಲಿ ಏನನ್ನೋ ಕಂಡಂತಾಗಿ ನಿಲ್ಲುತ್ತಿದ್ದರು. ರಸ್ತೆಯಂಚಿಗೆ ತೆರಳಿ ಕೋಲಿನಿಂದ ಇತ್ತಿಂದ ಅತ್ತ, ಅತ್ತಿಂದ ಇತ್ತ ಸವರುತ್ತಿದ್ದರು. ಅನಂತರ ಸಿಕ್ಕ ವಸ್ತುವನ್ನು ಕೈಯಲ್ಲಿ ಹಿಡಿದು ಮುಂದುವರಿಯುತ್ತಿದ್ದರು.
ರಸ್ತೆಯ ಎರಡೂ ಬದಿಗಳಲ್ಲಿ ಇವರ ಅಡ್ಡಾದಿಡ್ಡಿಯಾದ ಸಂಚಾರ ನಡೆಯುತ್ತಲೇ ಇತ್ತು. ಒಂದು ಕೈಯಲ್ಲಿ ಕೋಲು. ಇನ್ನೊಂದು ಕೈಯಲ್ಲಿ ಒಂದಿಷ್ಟು ವಸ್ತುಗಳು.
ಬೆಳ್ಳಂಬೆಳಗ್ಗೆ ಈ ಮಹಿಳೆ ಹೀಗೇಕೆ ಅಡ್ಡಾಡುತ್ತಿದ್ದಾರೆ? ಎನ್ನುವ ಆಲೋಚನೆ ದೂರದಿಂದಲೇ ಗಮನಿಸಿದ ನನ್ನ ಮನಸ್ಸಲ್ಲಿ ಮಂಡಿಗೆ ಹಾಕತೊಡಗಿತು. ಯೋಚನೆಯ ಸರಮಾಲೆ ತಲೆ ತಿನ್ನತೊಡಗಿತು. ನನ್ನ ನಡಿಗೆ ಸರಿ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಆ ಮಹಿಳೆಯನ್ನು ಸಮೀಪಿಸಿದಾಗಲೂ ಆಕೆಯ ಕೆಲಸ ಮುಂದುವರಿದೇ ಇತ್ತು. ಒಂದು ಕೈಯಲ್ಲಿ ಉದ್ದನೆಯ ಕೋಲು. ಇನ್ನೊಂದು ಕೈಯಲ್ಲಿ ಕೈ ತುಂಬಾ ಪ್ಲಾಸ್ಟಿಕ್ ಕವರ್ ಗಳು, ಗುಟ್ಕಾ ಪ್ಯಾಕೆಟ್ ಗಳು, ಕುರುಕಲು ತಿಂಡಿಯ ಪೊಟ್ಟಣದ ಹೊದಿಕೆಗಳು. ಅಷ್ಟಾದರೂ ಅವರ ಹುಡುಕುವ ಕಣ್ಣುಗಳು ರಸ್ತೆ ಅಂಚನ್ನು ಗಮನಿಸುವುದು ನಿಲ್ಲಿಸಿರಲಿಲ್ಲ.
ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ಗಳನ್ನು, ಮಣ್ಣಲ್ಲಿ ಕಳಿಯದ ವಸ್ತುಗಳನ್ನು ಆರಿಸಿ ಕೈ ತುಂಬಿಸಿಕೊಳ್ಳುತ್ತಿರುವ ಮಹಿಳೆಯ ನಡೆ ನನಗೆ ಅಚ್ಚರಿ ಎನ್ನಿಸಿ ಅವರನ್ನು ಮಾತನಾಡಿಸಬೇಕೆಂದುಕೊಂಡೆ. ಅಲ್ಲಿಯೇ ಪಕ್ಕದಲ್ಲಿ ಬಿದ್ದಿರುವ ಒಂದೆರಡು ಪ್ಲಾಸ್ಟಿಕ್ ತೊಟ್ಟೆಗಳನ್ನು ಕೈಗೆತ್ತಿಕೊಂಡು ಅವರ ಕೈಯಲ್ಲಿಟ್ಟು ಮಾತನಾಡಿಸಿದೆ.
ಹೀಗೆ ಆರಿಸಿದ ಪ್ಲಾಸ್ಟಿಕ್ ಗಳನ್ನು ಏನು ಮಾಡುತ್ತೀರಿ? ಪ್ರಶ್ನಿಸಿದೆ. “ಇಂದು ಕಾರ್ಪೊರೇಷನ್ ನ ಕಸದ ವಾಹನ ಬರುತ್ತದೆ. ಪ್ರತಿ ಬುಧವಾರ ಹಾಗೂ ಶನಿವಾರಕ್ಕೊಮ್ಮೆ ವಾಹನ ನಮ್ಮ ಓಣಿಗೆ ಆಗಮಿಸುತ್ತದೆ. ಹೀಗೆ ಆರಿಸಿದ ಕಸವನ್ನು ನಮ್ಮ ಮನೆಯ ಎದುರಿಗೆ ದೊಡ್ಡ ಪ್ಲಾಸ್ಟಿಕ್ ತೊಟ್ಟಿಯಲ್ಲಿ ತುಂಬಿಸಿ ಇಟ್ಟಿರುತ್ತೇನೆ. ಕಸದ ವಾಹನದ ಸಿಬ್ಬಂದಿ ತಪ್ಪದೆ ಅದನ್ನು ಕೊಂಡೊಯ್ಯುತ್ತಾರೆ” ಎಂದರು.
ತಮ್ಮ ಮನೆಯಲ್ಲಿಯೇ ಸಂಗ್ರಹವಾದ ಕಸವನ್ನು ಕಂಪೌಂಡಿನ ಪಕ್ಕದಲ್ಲಿ ರಾಶಿ ಹಾಕುವ, ಎಲ್ಲೆಂದರಲ್ಲಿ ಎಸೆಯುವ ಅಶಿಸ್ತು ಮೈಗೂಡಿಸಿಕೊಂಡ ಹಲವರಿರುವಾಗ ಹೆಚ್ಚು ಕಡಿಮೆ ಒಂದು ಕಿಲೋಮೀಟರ್ ರಸ್ತೆಯುದ್ದಕ್ಕೂ ಇಕ್ಕೆಲಗಳ ಪ್ಲಾಸ್ಟಿಕ್ಗಳನ್ನು ವಾರಕ್ಕೆರಡು ದಿನ ಆರಿಸಿ ತಂದು ಒಂದೆಡೆ ಸಂಗ್ರಹಿಸಿ ಕಸದ ವಾಹನಕ್ಕೆ ತುಂಬಿಸುತ್ತಿರುವ ಇವರ ಕಾರ್ಯ ವಿಶೇಷವೆನಿಸಿತು.
ಎಷ್ಟು ವರ್ಷದಿಂದ ಹೀಗೆ ಮಾಡುತ್ತಿದ್ದೀರಿ? ಪ್ರಶ್ನಿಸಿದೆ. ‘ಸರಿ ಸುಮಾರು ಹತ್ತು ವರ್ಷಗಳಾಗಿರಬಹುದು' ಉತ್ತರಿಸಿದರು. ಈ ರೀತಿಯ ಕೆಲಸದಲ್ಲಿ ತೊಡಗಿರುವ ನಿಮಗೆ ಸ್ಫೂರ್ತಿ ಏನು? ಎಂದೆ.
“ನಿತ್ಯ ವಾಕಿಂಗ್ ಮಾಡುವುದು ನನ್ನ ಅಭ್ಯಾಸ. ಆ ಸಂದರ್ಭ ರಸ್ತೆಯುದ್ದಕ್ಕೂ ಕಸ ಬಿದ್ದಿರುವುದು ನನ್ನ ಮನಸ್ಸನ್ನು ವಿಚಲಿತಗೊಳಿಸುತ್ತಿತ್ತು. ಹಾಗಾಗಿ ಸ್ವಯಂಸ್ಫೂರ್ತಿಯಿಂದ ಕಣ್ಣಿಗೆ ಕಾಣುವ ಕಸ ತೆಗೆದು ವಿಲೇವಾರಿ ಮಾಡುತ್ತಿದ್ದೇನೆ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆನ್ನುವುದು ನನ್ನ ಹಂಬಲ. ಹಾಗಾಗಿ ಈ ರೀತಿಯ ಸಣ್ಣ ಕೆಲಸವನ್ನು ಕಾಯಕವಾಗಿಸಿಕೊಂಡಿದ್ದೇನೆ” ಎಂದರು.
ಅವರ ವಯಸ್ಸು ಅರವತ್ತು ದಾಟಿರಬಹುದು. ಆದರೆ ಅವರಲ್ಲಿನ ಉತ್ಸಾಹಕ್ಕೆ ಮಾತ್ರ ವಯಸ್ಸಾಗಿರಲಿಲ್ಲ. ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನು ಆರಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿ ಎನ್ನುವ ಅವರ ಮಾತು ಚಿಂತನೆಗೆ ಹಚ್ಚಿತು.
ಮಾತಿನ ಕೊನೆಯಲ್ಲಿ ನಿಮ್ಮ ಹೆಸರೇನು? ಪ್ರಶ್ನಿಸಿದೆ. ‘ಕಮಲಾ ಪೈ’ ಅಂದರು. ಮುಂದುವರಿದು “ಅದೋ ನೋಡಿ ಅಲ್ಲಿಯೇ ನಮ್ಮ ಮನೆ ಇರುವುದು. ಗೇಟಿನ ಎದುರಿಗೆ ಚೀಲ ಇದೆಯಲ್ಲಾ, ಅದು ನಾನು ಇವತ್ತು ಆರಿಸಿದ ಕಸ’ ಎಂದು ಮಾತು ನಿಲ್ಲಿಸಿದರು.
ಅವರು ಕೈ ತೋರಿದೆಡೆ ದೃಷ್ಟಿ ಹೊರಳಿಸಿದೆ. ರಸ್ತೆ ಬದಿಯಲ್ಲಿ ಆರಿಸಿದ ನಿರುಪಯುಕ್ತ ವಸ್ತುಗಳು ಒಂದೆಡೆ ದೊಡ್ಡ ಗಂಟಾಗಿ ಕಸದ ವಾಹನದ ಬರುವಿಕೆಯನ್ನು ಕಾಯ್ದು ಕುಳಿತಿತ್ತು.
28.06.2020
Comments
Post a Comment