ಸ್ವಯಂಸೇವಕರನ್ನಾಗಿ ನಿಮ್ಮನ್ನು ಗುರುತಿಸಲಾಗಿದೆ ಎಂದರೆ ನೀವು ಈಗಾಗಲೇ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೀರಿ ಎಂದರ್ಥ...
ವಿಪತ್ತು ನಿರ್ವಹಣೆ ಸ್ವಯಂಸೇವಕರು ನಿರ್ವಹಿಸಬಹುದಾದ ಸೇವಾ ಸಾಧ್ಯತೆಗಳ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾನ್ಯ ಸಿ.ಓ.ಓ ಅವರಾದ ಶ್ರೀ ಅನಿಲ್ ಕುಮಾರ್ ಎಸ್. ಎಸ್ ಅವರು ವಿಪತ್ತು ನಿರ್ವಹಣೆ ಸ್ವಯಂಸೇವಕರ ತರಬೇತಿ ಕಾರ್ಯಾಗಾರದಲ್ಲಿ ವಿವರಿಸಿದ ಮಾಹಿತಿ ಹೀಗಿದೆ.
ವಿಪತ್ತು ನಿರ್ವಹಣೆಗೆ ಆಧಾರ ಸ್ಥಂಭವೆಂದರೆ ಸ್ವಯಂಸೇವಕರು. ನಿಮ್ಮನ್ನು ವಿಪತ್ತು ನಿರ್ವಹಣೆ ಘಟಕಕ್ಕೆ ಸ್ವಯಂಸೇವಕರನ್ನಾಗಿ ನಮ್ಮ ಕಾರ್ಯಕರ್ತರು ಆಯ್ಕೆ ಮಾಡಿದ್ದಾರೆ ಎಂದರೆ ನೀವು ಈಗಾಗಲೇ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೀರಿ ಎಂದರ್ಥ. ನಿಮ್ಮಲ್ಲಿ ಸಾಮಾಜಿಕ ಕಳಕಳಿಯಿದೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣವಿದೆ. ಹೀಗಾಗಿಯೇ ನೀವು ಗುರುತಿಸಲ್ಪಟ್ಟಿದ್ದೀರಿ.
ಇಲ್ಲಿಯವರೆಗೆ ಸೇವೆ ಸಲ್ಲಿಸಬೇಕೆನ್ನುವ ನಿಮ್ಮ ತುಡಿತಕ್ಕೆ ಕಾರ್ಯವ್ಯಾಪ್ತಿ ಬಹಳ ಸಣ್ಣದಿತ್ತು. ನಿಮ್ಮ ಓಣಿ ಅಥವಾ ನಿಮ್ಮ ಗ್ರಾಮಕ್ಕಷ್ಟೇ ಸೀಮಿತವಾಗಿತ್ತು. ಈಗ ಅದು ಹಿಗ್ಗಿದೆ. ನಿಮ್ಮ ಹಳ್ಳಿಯ ಗಡಿಯನ್ನು ದಾಟಿ ತಾಲ್ಲೂಕಿಗೆ ವಿಸ್ತರಿಸಿದೆ. ನಿಮ್ಮಲ್ಲಿರುವ ಸ್ಪಂದನೆಯ ಗುಣ, ನಿಮ್ಮಲ್ಲಿರುವ ಜ್ಞಾನ ಇನ್ನು ಮುಂದೆ ತಾಲ್ಲೂಕಿನಾದ್ಯಂತ ಜನರ ಅನುಕೂಲಕ್ಕೆ ಒದಗಬೇಕಿದೆ.
ವಿಪತ್ತು ನಿರ್ವಹಣೆಯಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಸೂಕ್ಷ್ಮ ಸಂಗತಿಗಳನ್ನು ಅರಿತು ಅಜಾಗರೂಕತೆ ತೋರದೇ ಸದಾ ಕಾಳಜಿಯಿಂದ ಇರಬೇಕಾಗುತ್ತದೆ. ನೀವು ಗಮನಿಸಿ ನೋಡಿ. ವಿಪತ್ತು ನಿರ್ವಹಣೆಗೆ ಬಳಸುವ ಉಪಕರಣಗಳ ಹಾಗೂ ವಸ್ತುಗಳ ಹೆಸರುಗಳನ್ನು ಗುರುತಿಸುವುದು ಸೇಫ್ಟಿ ಜಾಕೆಟ್, ಸೇಫ್ಟಿ ರೋಪ್, ಸೇಫ್ಟಿ ಹೆಲ್ಮೆಟ್, ಸೇಫ್ಟಿ ಲ್ಯಾಡರ್ ಎಂತಲೇ. ಅಂದರೆ ಸುರಕ್ಷತೆಯ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದು ಸಾರಿ ಹೇಳಿದಂತಿದೆ. ಈ ಉಪಕರಣಗಳು ಸ್ವಂತ ರಕ್ಷಣೆಗೆ ಇರುವಂತಹವು. ರಕ್ಷಿಸುವವರು ಮೊದಲು ತಮ್ಮನ್ನು ತಾವು ರಕ್ಷಿಸಿಕೊಂಡು ನಂತರ ಉಳಿದವರ ರಕ್ಷಣೆಗೆ ಸಿದ್ಧಗೊಳ್ಳಬೇಕು.
ಇಲ್ಲಿ ಎರಡು ದಿನಗಳ ಕಾಲ ನೀಡುತ್ತಿರುವ ತರಬೇತಿ ಕೇವಲ ಸಾಂಕೇತಿಕ. ವಿಪತ್ತು ನಿರ್ವಹಣೆಯಲ್ಲಿ ನೀವು ತಜ್ಞತೆ ರೂಪಿಸಿಕೊಳ್ಳಬೇಕೆಂದರೆ ಒಂದೊAದು ವಿಷಯಕ್ಕೆ ಒಂದೊಂದು ದಿನದ ತರಬೇತಿ ಪಡೆಯಬೇಕಾಗಬಹುದು. ಆಪತ್ತು ನಿರ್ವಹಣೆಗೆ ಕಾರ್ಯಪ್ರವೃತ್ತರಾಗಬೇಕಾದ ವಿಷಯಕ್ಕೆ ಬಂದರೆ ಸದಾ ಸಿದ್ಧರಾಗಿರಬೇಕಾದ ಸಂದರ್ಭ ಬರಬಹುದು. ಮಧ್ಯ ರಾತ್ರಿ ವಿಪತ್ತಿನ ಕುರಿತು ಮಾಹಿತಿ ಬಂದರೂ ಸೇವೆಗೆ ಸಿದ್ಧಗೊಳ್ಳಲು ತೆರಳಲು ಸಿದ್ಧರಿರಬೇಕು.
ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರ ಕಾರ್ಯ ವ್ಯಾಪ್ತಿ ಈಗ ಹಿಗ್ಗಿದೆ. ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿ ಸೇವಾ ಕಾರ್ಯಕ್ಷೇತ್ರವಾಗಿದೆ. ಕುಟುಂಬದ ಸದಸ್ಯರ ಸಂಖ್ಯೆಯೂ ವೃದ್ಧಿಸಿದೆ. ಒಂದುನೂರು ಸದಸ್ಯರನ್ನೊಳಗೊಂಡ ದೊಡ್ಡ ಕುಟುಂಬ ಸ್ವಯಂಸೇವಕರದಾಗಿದೆ. ನಾವು ಕೂಡ ನಿಮ್ಮೊಂದಿಗೆ ಪ್ರೀತಿಯ ಒಡನಾಟ ಹೊಂದಿರುತ್ತೇವೆ. ಮೊದಲು ನಮ್ಮ ರಕ್ಷಣೆಯೊಂದಿಗೆ ಇನ್ನೊಬ್ಬರ ರಕ್ಷಣೆಗೆ ತೊಡಗುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ. ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ.
ಕೇವಲ ವಿಪತ್ತು ಬಂದಾಗ ಮಾತ್ರ ನಮ್ಮ ಕ್ರಿಯಾಶೀಲತೆ ಸಲ್ಲದು. ಇತರ ಸಂದರ್ಭಗಳಲ್ಲಿಯೂ ತಮ್ಮ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಬೇಕಿದೆ. ಇದಕ್ಕೆ ಅವಕಾಶಗಳು ಹಲವಿದೆ. ನಿಮ್ಮೂರಿನ ಶಾಲೆಗೆ ಆಟದ ಮೈದಾನ ಇಲ್ಲದಿದ್ದಲ್ಲಿ, ಒಂದೆರಡು ದಿನದ ಶ್ರಮದಿಂದ ಅದು ರೂಪುಗೊಳ್ಳುವಂತಿದ್ದರೆ ಮೈದಾನ ರಚನೆಯ ಕೆಲಸ ಮಾಡಬಹುದು. ರಸ್ತೆ ಅಪಘಾತವಾದಾಗ ತೊಂದರೆಯಲ್ಲಿರುವ ವ್ಯಕ್ತಿಗೆ ಶೀಘ್ರ ಸ್ಪಂದಿಸಿ ನೆರವಾಗಬಹುದು. ನಿಮ್ಮೂರಿನಲ್ಲಿ ನಡೆಯುವ ಬ್ರಹತ್ ಸಮಾರಂಭಗಳಲ್ಲಿ ವ್ಯವಸ್ಥೆ ಅಸ್ಥವ್ಯಸ್ಥವಾಗದಂತೆ ನೋಡಿಕೊಳ್ಳಲು ತಂಡವಾಗಿ ನೆರವಾಗಬಹುದು. ಹೀಗೆ ಹಲವು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಸ್ವಯಂಸೇವಕರು ನಿರ್ವಹಿಸಬಹುದು.
ವಿಪತ್ತು ನಿರ್ವಹಣೆಯ ಸ್ವಯಂಸೇವಕರು ತಮ್ಮ ಸುರಕ್ಷತೆಯ ಬಗ್ಗೆ ಮೊದಲು ಗಮನ ಹರಿಸಬೇಕು. ತಮ್ಮ ಕುಟುಂಬದ ನೆಮ್ಮದಿಗೆ ಕೊಡುಗೆ ನೀಡಬೇಕು. ತಮ್ಮ ಸಾಮಾಜಿಕ ನಡವಳಿಕೆಯ ಕುರಿತು ಸದಾ ನಿಗಾ ವಹಿಸಬೇಕು. ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಜನರ ಪರಿಚಯ ಮಾಡಿಕೊಳ್ಳಬೇಕು. ಹಾಗೆಯೇ ಸಮಾಜದಲ್ಲಿ ತೊಂದರೆಗೆ ಸಿಲುಕಿದ ವ್ಯಕ್ತಿಗಳ ಸಹಾಯಕ್ಕೆ ನಿಲ್ಲಬೇಕು. ಅವರ ಕುಟುಂಬದ ನೆಮ್ಮದಿಗೆ ನಮ್ಮ ಕೊಡುಗೆ ನೀಡಬೇಕು.
ವರದಿ: ಕೋಡಕಣಿ ಜೈವಂತ ಪಟಗಾರ
Comments
Post a Comment