ಗ್ರಾಮದ ಜನರಲ್ಲಿ ಭೀತಿ ಮೂಡಿಸಿದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ವಿಪತ್ತು ನಿರ್ವಹಣೆ ಸ್ವಯಂಸೇವಕರು..


ಬೆಳ್ತಂಗಡಿ: ಬೆಳಾಲು ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ಹೆಬ್ಬಾವಿನ ಭೀತಿ ಜನರಲ್ಲಿ ಕಾಡುತ್ತಿತ್ತು. ಹಾವೊಂದು ಮನೆ ಬಾಗಿಲಿಗೆ ಬಂದು ಕೋಳಿಯನ್ನು ತಿಂದು ಹೋಯಿತು. ನಾಯಿಯನ್ನು ಹಿಡಿಯಿತು. ತೋಟದಲ್ಲಿ ಆಗಾಗ ಹರಿದಾಡುತ್ತಿದೆ. ಮನೆಯ ಮಾಡನ್ನೇರಿದೆ. ಕೊಟ್ಟಿಗೆಯ ಹತ್ತಿರ ಹೊಂಚು ಹಾಕುತ್ತಿದೆ  ಹೀಗೆ ಒಬ್ಬೊಬ್ಬರದು ಒಂದೊಂದು ಹಾವಿನ ಭೀತಿಯ ಮಾತುಗಳು.

ಈ ಹಾವಿನಿಂದ ಮುಂದೆ ಎಂತಹ ಅಪಾಯವಿದೆಯೋ ಆತಂಕ ಸುತ್ತಮುತ್ತಲಿನ ಇಪ್ಪತ್ತಕ್ಕೂ ಅಧಿಕ ಕುಟುಂಬಗಳಿಗೆ ಕಾಡುತ್ತಿತ್ತು.

ಇಂದು ನಾಲ್ಕು ಗಂಟೆಯ ವೇಳೆಗೆ (28.06.2020) ಸದಾಶಿವ ಮೈರಾಜೆ ಅವರ ಅಡಿಕೆ ತೋಟದಲ್ಲಿ ಕಳೆ ತೆಗೆಯುತ್ತಿರುವ ನಾಲ್ಕಾರು ಮಹಿಳೆಯರಿಗೆ ಹಾವು ಕಾಣಿಸಿಕೊಂಡಿದೆ. ಸುದ್ದಿ ತಿಳಿದ ತೋಟದ ಮಾಲೀಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ಬೆಳ್ತಂಗಡಿ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಾದ ಹರೀಶ್ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಮನೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದ ಹರೀಶ್ ಕೂಡಲೇ ಸ್ಪಂದಿಸಿದ್ದಾರೆ. ಸಹ ಸ್ವಯಂಸೇವಕರಾದ ಅಭಿಲಾಷ್ ಹಾಗೂ ಜಗದೀಶ್  ಅವರಿಗೆ ಕರೆ ಮಾಡಿ ಸದಾಶಿವ ಮೈರಾಜೆ ಅವರ ತೋಟದತ್ತ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. 

ವಿಪರೀತ ಮಳೆಯ ನಡುವೆ ನಡೆಸಿದ ಇವರ ಕಾರ್ಯಾಚರಣೆ ಯಶಸ್ವಿಗೊಂಡಿತು. ಸುಮಾರು ಎಂಟು ಅಡಿಗಳಷ್ಟು ಉದ್ದವಿರುವ ಹೆಬ್ಬಾವು  ಹರೀಶ್ ಅವರ ಕೈ ಸೇರಿತು. ಚೀಲದಲ್ಲಿ ಬಂದಿಯಾಯಿತು.

ಕಳೆದ ಮೂರ್ನಾಲ್ಕು ತಿಂಗಳಿನಿಂದ ಗ್ರಾಮದಲ್ಲಿ ಭೀತಿ ಮೂಡಿಸಿದ ಹಾವನ್ನು ಹರೀಶ್ ಮತ್ತು ಅವರ ತಂಡ ಚಾರ್ಮಾಡಿಯ ದಟ್ಟಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ. 

ಉರಗತಜ್ಞ ಹರೀಶ್ ಮತ್ತು ಅವರ ತಂಡದ ಕಾರ್ಯವನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ. ಹಾವಿನ ಭೀತಿಯಲ್ಲಿದ್ದ ಕುಟುಂಬಗಳೀಗ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

28.06.2020

Comments