ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಮಹಿಳೆಯನ್ನು ಭೇಟಿ ಮಾಡಿ ಕುಶಲೋಪಚರಿ ವಿಚಾರಿಸಿದ ವಿಪತ್ತು ನಿರ್ವಹಣಾ ಘಟಕದ ಸದಸ್ಯರು...
ಬೆಳ್ತಂಗಡಿ, ಜುಲೈ 29: ನಡ ಗ್ರಾಮದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರ ತಂಡವು ಇಂದು ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಶ್ರೀಮತಿ ಲಲಿತ ಅವರ ಮನೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ದಿನಾಂಕ 14.07.2020 ರಂದು ಇವರು ಮಂಜೊಟ್ಟಿ ಪೇಟೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ವಾಹನ ಬಡಿದು ತೀವ್ರವಾಗಿ ಗಾಯಗೊಂಡಿದ್ದರು.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ವಿಪತ್ತು ನಿರ್ವಹಣೆ ಸಂಯೋಜಕರಾದ ಶ್ರೀ ಮಂಜುನಾಥ್ ಅವರು ಆಟೋ ಚಾಲಕರಾದ ಶ್ರೀ ವಸಂತ್ ಗೌಡ, ಸ್ಥಳೀಯರಾದ ಶ್ರೀ ಜಯರೆಡ್ಡಿ, ರಮೇಶ್ ಗೌಡ, ಸುಭಾಷ್ ಗೌಡ ಅವರ ಸಹಕಾರದಿಂದ ಬೆಳ್ತಂಗಡಿಯ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದ್ದರು.
ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಇವರನ್ನು ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶ್ರೀಮತಿ ಲಲಿತ ಅವರು ಆಸ್ಪತ್ರೆಯಿಂದ ಮನೆಗೆ ಮರಳಿರುವುದನ್ನು ತಿಳಿದ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಅವರ ಮನೆ ಭೇಟಿ ಮಾಡಿ ಕುಶಲೋಪಚರಿ ವಿಚಾರಿಸಿದರು. ಆರೋಗ್ಯ ಸಂಪೂರ್ಣ ಸುಧಾರಿಸುವವರೆಗೆ ವಿಶ್ರಾಂತಿ ಪಡೆದುಕೊಳ್ಳುವಂತೆ ತಿಳಿಸಿದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಅಶ್ವಿನಿ, ವಿಪತ್ತು ನಿರ್ವಹಣೆ ಸಂಯೋಜಕಿ ಕು. ವಸಂತಿ, ವಿಪತ್ತು ನಿರ್ವಹಣೆ ಸ್ವಯಂಸೇವಕರಾದ ಶ್ರೀ ಉಮೇಶ್ ಗೌಡ, ಕು. ಪುಷ್ಪಲತಾ ಉಪಸ್ಥಿತರಿದ್ದರು.
Comments
Post a Comment