ಗುರುವಾಯನಕೆರೆ: ನಾಡಿಗೆ ಬಂದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞೆ ಶೋಭಾ..


ಗುರುವಾಯನಕೆರೆ, ಅಗಸ್ಟ್ 26:  ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕದ ಉರಗ ತಜ್ಞೆ ಶ್ರೀಮತಿ ಶೋಭಾ ಅವರು ಮಧ್ಯರಾತ್ರಿಯಲ್ಲಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ.

ತಣ್ಣೀರುಪಂಥ ವಲಯದ ಉರುವಾಲು ಗ್ರಾಮದ ಕುಪ್ಪೆಟ್ಟಿ ಎಂಬಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿ ಉದ್ದನೆಯ  ಹೆಬ್ಬಾವೊಂದು ಕಂಡುಬಂದಿತ್ತು. 

ಅಪಾಯಕಾರಿಯಂತೆ ಕಂಡುಬರುತ್ತಿರುವ ಹಾವು ಕಣ್ಣಿಗೆ ಗೋಚರವಾದಾಗ ಸಮಯ ಮಧ್ಯರಾತ್ರಿ ರಾತ್ರಿ ಹನ್ನೆರಡು ಗಂಟೆ.  

ತುರ್ತು ಕೆಲಸದ ನಿಮಿತ್ತ ಆ ರಸ್ತೆಯಲ್ಲಿ ತೆರಳುತ್ತಿದ್ದ ಸ್ಥಳೀಯರಾದ ಶ್ರೀ ವಸಂತ್ ಅವರು ರಸ್ತೆಯ ಮೇಲೆ ಹರಿಯುತ್ತಿದ್ದ ಹಾವನ್ನು ಗಮನಿಸಿದ್ದಾರೆ. ಅದನ್ನು ಹಿಡಿದು ಕಾಡಿಗೆ ಬಿಡದಿದ್ದರೆ ಸಮೀಪದ ಮನೆಗಳಿಗೆ ತೆರಳಿ ಸೇರಿಕೊಳ್ಳುವ ಭೀತಿಯಿತ್ತು.

ಅಪಾಯ ಅರಿತ ವಸಂತ್ ಅವರು ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕಿ ಶ್ರೀಮತಿ ಶೋಭಾ ಅವರಿಗೆ ದೂರವಾಣಿ ಕರೆ ಮಾಡಿರುತ್ತಾರೆ.

ಮಧ್ಯರಾತ್ರಿ ಹನ್ನೆರಡು ಕಾಲಿಗೆ ರಿಂಗೆಣಿಸುತ್ತಿದ್ದ ಮೊಬೈಲ್ ಕರೆಯನ್ನು ಸ್ವೀಕರಿಸಿದಾಗ ಹಾವು ಹರಿದಾಡುತ್ತಿರುವ ವಿಷಯ ತಿಳಿದು ಬಂದಿದೆ. ತಕ್ಷಣ ಸ್ಪಂದಿಸಿದ ಉರಗ ತಜ್ಞೆ ಶೋಭಾ ಅವರು ಪತಿ ಪ್ರಶಾಂತ್ ಅವರೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಮುಖ್ಯ ರಸ್ತೆಯ ಬದಿಯಲ್ಲಿ ಇರುವ ಹಾವು ತಕ್ಷಣವೇ ಇವರ ಕೈಯಲ್ಲಿ ಬಂದಿಯಾಗಿದೆ. ಹಿಡಿದ ಹಾವನ್ನು ಹತ್ತಿರದ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.

ರಾತ್ರಿಯ ಸಮಯ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದ ಇವರ ಸೇವಾಕಾರ್ಯಕ್ಕೆ ಮೆಚ್ಚುಗೆ  ಸೂಚಿಸಿದ ಸುತ್ತಮುತ್ತಲಿನ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.

Comments