ಬೆಳ್ತಂಗಡಿ: ಬೆಳಿಗ್ಗಿನ ಜಾವ ಮೂರು ಗಂಟೆಗೆ ಉರಗ ಕಾರ್ಯಾಚರಣೆ..
ಬೆಳ್ತಂಗಡಿ: ಬೆಳಗ್ಗಿನ ಜಾವ 3.30 ಕ್ಕೆ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕ ಸ್ವಸ್ಥಿಕ್ ಕನ್ಯಾಡಿ ಅವರ ಮೊಬೈಲ್ ರಿಂಗೆಣಿಸಿತು.
ಎಲ್ಲರೂ ಬೆಳಗಿನ ಜಾವದ ಸಿಹಿ ನಿದ್ದೆಯಲ್ಲಿರುವಾಗ ತನ್ನ ಪೋನ್ ಸದ್ದು ಮಾಡುತ್ತಿರುವುದನ್ನು ಆಲಿಸಿದ ಸ್ವಸ್ಥಿಕ್ ಅವರಿಗೆ ಅರೆ ನಿದ್ದೆಯಲ್ಲಿಯೂ ಅಚ್ಚರಿಯಾಯಿತು. ಕರೆಯನ್ನು ನಿರ್ಲಕ್ಷಿಸಲಿಲ್ಲ..ಸ್ವೀಕರಿಸಿದರು...
ಅತ್ತ ಮಾತನಾಡುತ್ತಿರುವವರ ದನಿಯಲ್ಲಿ ಭೀತಿ ಇತ್ತು. ಅದು ಹಾವಿನ ಭೀತಿ. ಉದ್ದನೆಯ ಹಾವೊಂದು ಮನೆಯ ಆವರಣದೊಳಗೆ ಸೇರಿಕೊಂಡು ಆಂತಕ ಸೃಷ್ಟಿಸಿರುವುದನ್ನು ಕರೆ ಮಾಡಿದವರು ಫೋನಲ್ಲಿ ವಿವರಿಸಿದರು. ಹಾವು ಹಿಡಿಯಲು ಸಹಕಾರವನ್ನೂ ಅಪೇಕ್ಷಿಸಿದರು.
ವಿಪತ್ತು ನಿರ್ವಹಣಾ ಘಟಕದ ಶಿಸ್ತಿನ ಸೇನಾನಿ ಸ್ವಸ್ಥಿಕ್ ತಡಮಾಡಲಿಲ್ಲ. ಸಮಯದ ಮುಖ ನೋಡಲಿಲ್ಲ. ಲೈಟರ್ ಹಿಡಿದು ಸರಿಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಆ ಸ್ಥಳಕ್ಕೆ ತೆರಳಿದರು. ಸ್ಥಳ ತಲುಪುವುದರೊಳಗಾಗಿ ಒಂದೆರಡು ಪರಿಚಯಸ್ಥರಿಗೆ ಕರೆ ಮಾಡಿ ಅವರು ಸ್ಥಳಕ್ಕೆ ಬರುವಂತೆ ನೋಡಿಕೊಂಡರು.
ಸುತ್ತಮುತ್ತ ಕತ್ತಲು, ಕತ್ತಲು. ಕತ್ತಲ ನಡುವೆ ಅತ್ತಿತ್ತ ಹರಿಯುತ್ತಿದ್ದ ಹಾವು ಭೀತಿ ಹುಟ್ಟಿಸಿ ಸುತ್ತಲಿನವರಿಗೆ ತಾಪತ್ರಯ ತಂದಿಟ್ಟಿತ್ತು. ಗಂಟೆಗಳಿಗೂ ಅಧಿಕವಾದ ಕತ್ತಲಿನ ಕಾರ್ಯಾಚರಣೆಯಲ್ಲಿ ಉದ್ದನೆಯ ಉರಗ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರ ಕೈಸೇರಿತ್ತು.
ಹಿಡಿದ ಹಾವನ್ನು ಬೆಳಗಾಗುವ ಮುಂಚೆ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಭೀತಿಯಿಂದ ನಿದ್ದೆ ಬಿಟ್ಟಿದ್ದ ಮಂದಿ ಮುಂಜಾನೆ ಸಮಯ ನಿರುಮ್ಮಳ ನಿದ್ದೆಗೆ ಜಾರಿದ್ದಾರೆ.
ಸುಂದರಗೌಡ ಬಜಿಲ, ಚಂದ್ರಶೇಖರ ಗೌಡ, ಗಿರೀಶ್ ಗೌಡ, ಸಂದೀಪ್ ಗೌಡ, ಅಶ್ವತ್ ಗೌಡ, ಯಶೋಧರ ಗೌಡ ಬಜಿಲ ಉರಗ ಕಾರ್ಯಾಚರಣೆಯಲ್ಲಿ ತೊಡಗಿಕೊಂಡವರು.
Comments
Post a Comment