ಬಡ ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದ ಜನಜಾಗೃತಿ ನಿರ್ದೇಶನಾಲಯ... ವಿಜಯವಾಣಿ ಪತ್ರಿಕೆಯ ಕಳಕಳಿಗೆ ಸ್ಪಂದಿಸಿದ ಹೇಮಾವತಿ ವಿ. ಹೆಗ್ಗಡೆಯವರು.
ಬೆಳ್ತಂಗಡಿ, ಅಗಸ್ಟ್ 21: ತೀರಾ ಆರ್ಥಿಕ ಸಂಕಷ್ಟ, ಅಸಹಾಯಕತೆ ಮತ್ತು ಮಾನಸಿಕ ಅನಾರೋಗ್ಯದಿಂದ ಹದಗೆಟ್ಟಿರುವ ಬೆಳ್ತಂಗಡಿ ತಾಲೂಕಿನ, ನಿಡ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ, ಸಂಕದಕಟ್ಟೆ, ಚೆನ್ನಪ್ಪ ಗೌಡ ಮತ್ತು ಕಮಲ ದಂಪತಿಗಳ ಕುಟುಂಬದ ಕರಾಳ ಕಥೆಯನ್ನು ವಿಜಯವಾಣಿ ಪತ್ರಿಕೆಯು ವರದಿ ಮಾಡಿತ್ತು. ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು ತಕ್ಷಣ ಸ್ಪಂದಿಸಿ, ಈ ಬಗ್ಗೆ ಪರಿಶೀಲಿಸುವಂತೆ ಜನಜಾಗೃತಿ ಪ್ರಾದೇಶಿಕ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿ. ವಿವೇಕ್ ವಿ. ಪಾಯ್ಸ್ ರವರಿಗೆ ಜವಾಬ್ದಾರಿ ವಹಿಸಿದ್ದರು. ಅವರು ಕೂಡಲೇ ವಿಜಯವಾಣಿ ವರದಿಗಾರರಾದ ಶ್ರೀ ಮನೋಹರ ಬಳಂಜ, ಬೆಳ್ತಂಗಡಿ ಯೋಜನಾಧಿಕಾರಿ ಶ್ರೀ ಜಯಕರ ಶೆಟ್ಟಿ, ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿಯ ಸದಸ್ಯರಾದ ಶ್ರೀ ವೆಂಕಣ್ಣ ಕೊಯ್ಯೂರು, ಪತ್ರಕರ್ತ ಸಂಘದ ಅಧ್ಯಕ್ಷರಾದ ಶ್ರೀ ಅಶ್ರಫ್ ಆಲಿ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ರಿ. ಮಂಜೇಶ್ವರ ಇದರ ತಾಲೂಕು ಸಂಯೋಜಕ ಶ್ರೀ ಸಂತೋಷ್‌ರವರ ಜೊತೆಯಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಶ್ರೀ ಚೆನ್ನಪ್ಪ ಗೌಡರ ಮನೆಭೇಟಿ ಮಾಡಿರುತ್ತಾರೆ.
ಮನೆಯಲ್ಲಿ ಚೆನ್ನಪ್ಪ ಗೌಡರ ಮಗಳಾದ ಶ್ರೀಮತಿ ಪುಷ್ಪಾವತಿಯವರನ್ನು ಮಾನಸಿಕ ಅಸ್ವಸ್ಥತೆ, ಅನಾರೋಗ್ಯ ಪೀಡಿತರಾಗಿರುವ ಕಾರಣಕ್ಕಾಗಿ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಬೀಗ ಹಾಕಲಾಗಿತ್ತು. ಈ ಹಿರಿಯ ದಂಪತಿಗಳು ಹಾಗೂ ಎರಡು ಮೊಮ್ಮಕ್ಕಳು ಮತ್ತು ಹಿರಿಯ ಮಗಳಾದ ಪ್ರೇಮ ರವರು ಮನೆಯಲ್ಲಿದ್ದು, ದುಡಿಮೆ ಮಾಡಿ ಸಂಪಾದನೆ ಮಾಡಲು ಯಾರೊಬ್ಬರೂ ಈ ಮನೆಯಲ್ಲಿ ಇಲ್ಲವಾದ ಕಾರಣಕ್ಕಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಈ ಕುಟುಂಬದಲ್ಲಿತ್ತು.
ಪುಷ್ಪಾವತಿಯವರ ಗಂಡ ಮನೆ ಬಿಟ್ಟು ಹೋದ ಕಾರಣಕ್ಕಾಗಿ ಮನೆಯ ಜವಾಬ್ದಾರಿಯನ್ನು ಹಿರಿಯ ಮಗಳಾದ ಶ್ರೀಮತಿ ಪ್ರೇಮರವರು ವಹಿಸಿಕೊಂಡಿದ್ದು, ಬೀಡಿ ಕಟ್ಟಿ ಜೀವನ ನಿರ್ವಹಿಸುವ ಪರಿಸ್ಥಿತಿ ಇವರದ್ದಾಗಿದೆ. ಮಾನಸಿಕ ಅಸ್ವಸ್ಥೆ ಪುಷ್ಪಾವತಿಯವರ ಎರಡು ಗಂಡು ಮಕ್ಕಳು ವಿದ್ಯಾಭ್ಯಾಸ ಮಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದರು.
ಇದನ್ನು ಗಮನಿಸಿದ ನಾವು ಮಹಿಳೆ ಪುಷ್ಪಾವತಿಯವರಿಗೆ ಶಾಶ್ವತ ಚಿಕಿತ್ಸೆ, ಎರಡು ಮಕ್ಕಳಿಗೆ ವೃತ್ತಿಪರ ಶಿಕ್ಷಣ ನೀಡುವ ಬಗ್ಗೆ ತೀರ್ಮಾನಿಸಿದಾಗ ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ರಿ. ಇವರು ಮಹಿಳೆಯ ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಲ್ಲದೆ, ಮಹಿಳೆಯನ್ನು ದಿನಾಂಕ:14.08.2020 ರಂದು ಯೆನಪೋಯ ಆಸ್ಪತ್ರೆ(ಮಾನಸಿಕ ಚಿಕಿತ್ಸಾ ವಿಭಾಗ)ಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆಯ ಅಂಬುಲೆನ್ಸ್ನಲ್ಲಿ ಕರೆದೊಯ್ದು, ದಾಖಲಿಸಲಾಗಿದೆ. ಇದೀಗ ಮಹಿಳೆ 10 ವರ್ಷದ ಬಳಿಕ ಮಾತನಾಡುವುದು, ಅತ್ತಿತ್ತ ನಡೆಯುವುದು, ಪ್ರತಿಕ್ರಿಯಿಸುವುದು ಹಾಗೂ ವೈಯಕ್ತಿಕ ಸ್ವಚ್ಛತೆಯನ್ನೂ ಅವರೇ ಮಾಡುವ ಪರಿಸ್ಥಿತಿಗೆ ಕೇವಲ 5 ದಿನಗಳ ಚಿಕಿತ್ಸೆಯಲ್ಲಿ ಬದಲಾಗಿರುವುದು ವಿಶೇಷವಾಗಿದೆ. ಈ ಚಿಕಿತ್ಸೆಯ ಬಳಿಕ ಇವರನ್ನು ಸ್ನೇಹಾಲಯದ ಆಶ್ರಮಕ್ಕೆ ಕರೆದೊಯ್ದು ಸಂಪೂರ್ಣ ಗುಣಮುಖವಾಗುವವರೆಗೆ ಉಚಿತವಾಗಿ ನೋಡಿಕೊಳ್ಳಲಾಗುವುದೆಂದು ಆಶ್ರಮದ ಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ತ, ಸಲಹೆಗಾರರಾದ ಶ್ರೀ ಜಿಯೋ ಅಗ್ರಾರ್ ತಿಳಿಸಿರುತ್ತಾರೆ.
ಪುಷ್ಪಾವತಿಯವರ ಹಿರಿಯ ಮಗ ಪುಷ್ಪರಾಜ್ ಪಿಯುಸಿಯಲ್ಲಿ ಅನುತ್ತೀರ್ಣನಾಗಿರುತ್ತಾನೆ. ಅವನಿಗೆ ಐಟಿಐ ಮಾಡುವ ಉತ್ಸಾಹ ಇದೆ. ಅವನು 2 ವರ್ಷದ ಫಿಟ್ಟರ್ ಕೋರ್ಸ್ ಮಾಡಲು ತಯಾರಿದ್ದು, ಈ ಕುರಿತಾಗಿ ವೇಣೂರು ಶ್ರೀ.ಧ.ಮ. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದಾಖಲಾತಿಗೆ, ಹಾಸ್ಟೆಲ್ ವ್ಯವಸ್ಥೆಗೆ ಮತ್ತು ಸಂಬಂಧಪಡುವ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಶ್ರೀ ಧ.ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯವರಾದ ಶ್ರೀ ಯಶೋವರ್ಮ ರವರಿಗೆ ವಿನಂತಿಸಿಕೊಂಡಂತೆ, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಸೂಚನೆಯಂತೆ ಇವನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚುಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಎರಡನೇ ಮಗ ಶ್ರೀ ಪದ್ಮರಾಜ್ 10 ನೇ ತರಗತಿ ಫೇಲಾಗಿದ್ದು, ಇವನನ್ನು ಅದೇ ವೇಣೂರಿನ ಶ್ರೀ.ಧ.ಮ. ಕೈಗಾರಿಕಾ ತರಬೇತಿ ಸಂಸ್ಥೆಗೆ 1 ವರ್ಷದ ವೆಲ್ಡರ್ ಕೋರ್ಸ್ಗೆ ಸೇರಿಸಲು ತಯಾರಿ ನಡೆಸಲಾಗಿದೆ. ಈ ಸಂಬಂಧ ತಗಲುವ ವಿದ್ಯಾರ್ಥಿಯ ಎಲ್ಲಾ ಖರ್ಚುಗಳನ್ನು ಬೆಳ್ತಂಗಡಿ ರೋಟರಿ ಕ್ಲಬ್‌ನಿಂದ ಭರಿಸಲು ಮುಂದಾಗಿದ್ದು, ಈಗಾಗಲೇ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಧನಂಜಯ ರಾವ್, ಡಾ| ಶಶಿಧರ್ ಡೋಂಗ್ರೆ, ಕಾರ್ಯದರ್ಶಿ ಶ್ರೀಧರ್ ರವರು ರೂ.15,000/-ದ ಚೆಕ್‌ನ್ನು ವೇಣೂರು ಐ.ಟಿ.ಐ.ನ ಪ್ರಾಂಶುಪಾಲರಾದ ಶ್ರೀ ವಿಶ್ವೇಶ್ವರ ಪ್ರಸಾದ್ ರವರಿಗೆ ಹಸ್ತಾಂತರಿಸಿದರು. ಈ ಕುಟುಂಬಕ್ಕೆ ಪ್ರಸ್ತುತ ಸ್ಪಂದನಾ ಸೇವಾ ಸಂಘ, ಬೆಳ್ತಂಗಡಿ ವತಿಯಿಂದ ರೂ.15,000/-, ಅಖಿಲ ಕರ್ನಾಟಕ ರಾಜಕೇಸರಿ ಸಂಘದಿಂದ 50 ಕೆ.ಜಿ. ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳನ್ನು ವಿತರಿಸಿರುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ಪ್ರಾದೇಶಿಕ ನಿರ್ದೇಶನಾಲಯದ ಮೂಲಕ ನಡೆಸಲ್ಪಡುವ ವಿಪತ್ತು ನಿರ್ವಹಣಾ ಕಾರ್ಯಕ್ರಮದಡಿಯಲ್ಲಿ ಈ ಕುಟುಂಬಕ್ಕೆ ಸಹಕರಿಸಲು ಪೂರಕವಾಗಿ ರೂ.30,000/- ಅನುದಾನವನ್ನು ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್ ರವರು ಬಿಡುಗಡೆಗೊಳಿಸಿರುತ್ತಾರೆ ಎಂದು ಜನಜಾಗೃತಿ ಪ್ರಾದೇಶಿಕ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.
ಬರಹ: ಶ್ರೀ ವಿವೇಕ್ ವಿ. ಪಾಯಸ್
ಪ್ರಾದೇಶಿಕ ನಿರ್ದೇಶಕರು
ಜನಜಾಗೃತಿ ನಿರ್ದೇಶನಾಲಯ
Comments
Post a Comment