ಜನಜಾಗೃತಿ ಪ್ರಾದೇಶಿಕ ಕಚೇರಿ ಉದ್ಘಾಟನೆ

ಬೆಳ್ತಂಗಡಿ, ಸಪ್ಟೆಂಬರ್ 18 : ದುಶ್ಚಟಮುಕ್ತ ಸಮಾಜದ ಕನಸನ್ನು ಕಂಡವರು ಮಹಾತ್ಮ ಗಾಂಧೀಜಿಯವರು. ಅವರ ಕನಸನ್ನು ಜನಜಾಗೃತಿ ವೇದಿಕೆ ಮೂಲಕ ಸಾವಿರಾರು ಕುಟುಂಬಗಳನ್ನು ದುಶ್ಚಟಮುಕ್ತ ಕುಟುಂಬವನ್ನಾಗಿಸಿ ಗಾಂಧೀಜಿಯವರ ಕನಸನ್ನು ನನಸು ಮಾಡಿದವರು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದರು.
ಅವರು ಶುಕ್ರವಾರ ಸಿಂಡಿಕೇಟ್ ಬ್ಯಾಂಕ್ ಬಳಿ ಇರುವ ಶ್ರೀಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಮ್ಯಾನ್ಷನ್ ಕಟ್ಟಡದಲ್ಲಿ ಜನಜಾಗೃತಿ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಜಾಗೃತಿಯ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿ ಹೆಗ್ಗಡೆಯವರ ಚಿಂತನೆಗೆ ಸಮಾನ ಮನಸ್ಕರು ಕೈಜೋಡಿಸಿದ ಪರಿಣಾಮ ಇಂದು ಸಾವಿರಾರು ಮಂದಿ ಸ್ವಯಂ ಪ್ರೇರಿತರಾಗಿ ದುಶ್ಚಟಮುಕ್ತರಾಗುತ್ತಿದ್ದಾರೆ. ಹೊಸ ಬೆಳಕನ್ನು ಕೊಡುವ ಮೂಲಕ ಸಮಾಜದಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯವಾಗಿದೆ. ಜನಜಾಗೃತಿ ವೇದಿಕೆಯಂತಹ ಕಾರ್ಯಕ್ರಮ ಇಂದಿನ ಯುವ ಸಮುದಾಯಕ್ಕೆ ಅತೀ ಅಗತ್ಯವಾಗಿದ್ದು ಮನೆಯವರು, ಮಕ್ಕಳು ದುಶ್ಚಟಕ್ಕೆ ಒಳಗಾಗುವ ಸನ್ನಿವೇಶವನ್ನು ನೋಡಲಾರದೆ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಎಲ್ಲರು ಕೈಜೋಡಿಸಬೇಕು ಎಂದರು. 
ಧ.ಗ್ರಾ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್ ಮಂಜುನಾಥ್ ಮಾತನಾಡಿ ಧ.ಗ್ರಾ ಯೋಜನೆಯು ನೊಂದ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಸೇವೆ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತಿದ್ದು ಇದರೊಂದಿಗೆ ಅನೇಕ ಸಮಾನ ಮನಸ್ಕರು ಕೈಜೋಡಿಸಿ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಇಂದು ವಿಪತ್ತು ನಿರ್ವಹಣಾ ತಂಡವನ್ನು ಮಾಡುವ ಮೂಲಕ ಆಪತ್ಕಾಲದಲ್ಲಿದ್ದವರಿಗೆ ರಕ್ಷಣೆಯನ್ನು ನೀಡುತ್ತಿದೆ. ಮಾಶಾಸನ ಯೋಜನೆಯ ಸೌಲಭ್ಯವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಕೊರೊನಾ ಮಹಾಮಾರಿ ಇಂದು ಅತ್ಯಂತ ಅಪಾಯಕಾರಿಯಾಗಿದ್ದು ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವ ಮೂಲಕ ತಮ್ಮ ರಕ್ಷಣೆಯನ್ನು ತಾವು ಮಾಡಿಕೊಳ್ಳಬೇಕು ಎಂದರು. 

ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು ಮಾತನಾಡಿ ದುಶ್ಚಟಮುಕ್ತ ಸಮಾಜದ ಕನಸನ್ನು ಕಾಣುತ್ತಿರುವ ಜನಜಾಗೃತಿ ವೇದಿಕೆ ಇಂದು ವಿಪತ್ತು ನಿರ್ವಹಣಾ ತಂಡವನ್ನು ರಚಿಸುವುದರೊಂದಿಗೆ ತುರ್ತು ಸಂದರ್ಭದಲ್ಲಿ ನೊಂದವರಿಗೆ ರಕ್ಷಣೆ ನೀಡಲು ಮುಂದಾಗುತ್ತಿದೆ. ಜನಜಾಗೃತಿ ವೇದಿಕೆಯು ಧ.ಗ್ರಾ ಯೋಜನೆಯ ಅಂಗ ಸಂಸ್ಥೆಯಾಗಿದ್ದು ಇಂದು ಸುಮಾರು ಹತ್ತು ಸಾವಿರ ಮಂದಿಗೆ ಎಂಟು ಕೋಟಿ. ರೂ. ಮಾಶಾಸನ ನೀಡುವ ಏಕೈಕ ಅತೀದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ಡಾ| ಹೆಗ್ಗಡೆಯವರ ಹಾಗೂ ಹೇಮಾವತಿ ವಿ ಹೆಗ್ಗಡೆಯವರ, ಡಿ. ಹರ್ಷೇಂದ್ರ ಕುಮಾರ್‌ರವರ ಮತ್ತು ಎಲ್ಲಾ ಸ್ವಯಂ ಸೇವಾ ತಂಡದ ಸಹಕಾರವೇ ಯಶಸ್ಸಿಗೆ ಕಾರಣ ಎಂದರು. 

ನೂತನ ಕಚೇರಿಯನ್ನು ಹಿರಿಯ ನವಜೀವನ ಸಮಿತಿಯ ಸದಸ್ಯರಾದ ಶ್ರೀಧರ ಹೆಗ್ಡೆ ದಂಪತಿಗಳು ಉದ್ಘಾಟಿಸಿದರು. 
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಅಧ್ಯಕ್ಷೆ ಶಾರದಾ ಆರ್ ರೈ, ಮಾಜಿ ರಾಜ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಉದ್ಯಮಿ ರಾಜಿತ್ ಶೆಟ್ಟಿ, ನ್ಯಾಯವಾದಿ ರತ್ನವರ್ಮ ಬುಣ್ಣು, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಚೆನ್ನಪ್ಪ ಗೌಡ, ಮಾಧವ, ಭಾಸ್ಕರ್, ಗಣೇಶ್, ಸಿರಿ ವಿಭಾಗದ ಅಧಿಕಾರಿ ತಿಮ್ಮಯ್ಯ ನಾಯ್ಕ್ ಉಪಸ್ಥಿತರಿದ್ದರು.

Comments