ಭಟ್ಕಳ: ಅಪಾಯಕಾರಿಯಾದ ತರೆದ ಬಾವಿಯ ಸುತ್ತಲೂ ಬೇಲಿ ರಚಿಸಿದ ಭಟ್ಕಳ ವಿಪತ್ತು ನಿರ್ವಹಣೆ ಸ್ವಯಂಸೇವಕರು.

ಭಟ್ಕಳ, ಅಕ್ಟೋಬರ್ 28: ಮನೆಯ ಎದುರು, ತೋಟ, ಗದ್ದೆ ಮುಂತಾದ ಸ್ಥಳಗಳಲ್ಲಿ ತೆರೆದ ಬಾವಿಯನ್ನು ನಾವು ಹಲವು ನೋಡಿರುತ್ತೇವೆ. ರಾತ್ರಿ ವೇಳೆಯಲ್ಲಿ ಆ ಬಾವಿಯಲ್ಲಿ ಕಾಲುಜಾರಿ ಬಿದ್ದ ಘಟನೆಗಳ ಬಗ್ಗೆಯೂ ಓದಿರುತ್ತೇವೆ. ಮನುಷ್ಯರು, ಪ್ರಾಣಿಗಳು ಆಯ ತಪ್ಪಿ ಬಿದ್ದು ಪ್ರಾಣ ಕಳೆದುಕೊಂಡಿರುವುದೂ ನಮ್ಮ ಕಿವಿಗೆ ಆಗಾಗ ಬೀಳುತ್ತಿರುತ್ತದೆ.

ಆದರೆ ಪ್ರಾಣಕ್ಕೆ ಮಾರಕವಾಗಬಲ್ಲ ಅಂತಹ ಬಾವಿಯ ಕಡೆಗೆ ದಿವ್ಯ ನಿರ್ಲಕ್ಷ್ಯ ಮಾತ್ರ ನಮ್ಮಲ್ಲಿ ಸಾಮಾನ್ಯ. 

ಇಂತಹ ಬಾವಿಯನ್ನು ಗುರುತಿಸಿ ಸಂಭವನೀಯ ಅಪಾಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಭಟ್ಕಳ ನಗರ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಮಾಡುತ್ತಿದ್ದಾರೆ. 

ಅಲ್ಲದೇ ಅಂತಹ ಬಾವಿಯನ್ನು ಹೊಂದಿರುವ ಕುಟುಂಬಗಳನ್ನು ಸಂಪರ್ಕಿಸಿ ಬಾವಿಯ ಸುತ್ತಲೂ ತಾತ್ಕಾಲಿಕ ಬೇಲಿಯನ್ನು ರಚಿಸುವ ಕೆಲಸವನ್ನೂ ಮಾಡಿರುತ್ತಿದ್ದಾರೆ.

ಭಟ್ಕಳ ನಗರ ವಲಯದ ಮುಂಡಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿನ ಶ್ರೀಮತಿ ದಾಕ್ಷಾಯಣಿ ಅಣ್ಣಪ್ಪ ಆಚಾರಿ ಮತ್ತು ಶ್ರೀ ಕುಪ್ಪಯ್ಯ ಆಚಾರಿ ಎನ್ನುವವರಿಗೆ ಸೇರಿದ ನೆಲಸಮವಾಗಿರುವ ಎರಡು ತೆರದ ಬಾವಿಗಳ ಸುತ್ತಲೂ ತಾತ್ಕಾಲಿಕ ಬೇಲಿ ನಿರ್ಮಿಸುವ ಕೆಲಸವನ್ನು ಇಂದು ಭಟ್ಕಳ ವಲಯದ ಮೇಲ್ವಿಚಾರಕರಾದ ಶ್ರೀ ಭರತ ನಾಯ್ಕರವರ ಮುಂದಾಳತ್ವದಲ್ಲಿ ನೆರವೇರಿಸಲಾಗಿದೆ.

ಹೊನ್ನಾವರ-ಭಟ್ಕಳ ತಾಲೂಕಿನ ಯೋಜನಾಧಿಕಾರಿಗಳಾದ  ಶ್ರೀ ಎಮ್,ಎಸ್,ಈಶ್ವರ  ಅವರ ಮಾರ್ಗದರ್ಶನದಲ್ಲಿ ಸದ್ಯಕ್ಕೆ ಅತೀ ಅಪಾಯದಲ್ಲಿರುವ ಎರಡು ಬಾವಿಯನ್ನು ಗುರುತಿಸಿ ಬಾವಿಯ ಸುತ್ತ ಬೇಲಿಯನ್ನು ರಚಿಸಿ ಕೊಡಲಾಗಿದೆ.

ಸಂಬಂಧಿಸಿದ ಕುಟುಂಬಗಳನ್ನು ಭಟ್ಕಳ ವಲಯ ಮೇಲ್ವಿಚಾರಕರಾದ ಶ್ರೀ ಭರತ ನಾಯ್ಕ ಹಾಗೂ ವಿಪತ್ತು ನಿರ್ವಹಣಾ ಸಂಯೋಜಕರಾದ ಮಾದೇವ ನಾಯ್ಕ ತೆಂಗಿನಗುಂಡಿ ಇವರು ಭೇಟಿ ನೀಡಿ ಇಂತಹ ಬಾವಿಯಿಂದ ಮುಂದೆ ಸಂಭವಿಸಬಹುದಾದ ಅಪಾಯದ ಬಗ್ಗೆ ಕುಟುಂಬದ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟು ಅವರ ಮನವೊಲಿಸಿ ಎರಡೂ ಬಾವಿಗೆ ತಾತ್ಕಾಲಿಕ ಬೇಲಿ ನಿರ್ಮಿಸಿರುತ್ತಾರೆ. 

ಮುಂದಿನ ದಿನದಲ್ಲಿ ಬಾವಿಗೆ ಪಕ್ಕಾ ವ್ಯವಸ್ಥೆ ಮಾಡಿಸುವಂತೆ ತಿಳಿಸಿರುತ್ತಾರೆ. ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರ ಮನವಿಗೆ ಸ್ಪಂದಿಸಿದ ಎರಡೂ ಕುಟುಂಬದವರು ಬಾವಿಯ ಸುತ್ತಲೂ ಕಟ್ಟೆ ಕಟ್ಟುವುದಕ್ಕೆ ಒಪ್ಪಿಕೊಂಡು ಸ್ಪಂದಿಸಿರುತ್ತಾರೆ.

ಈ ಸೇವಾ ಕಾರ್ಯದಲ್ಲಿ ಮುಂಡಳ್ಳಿ ಸೇವಾಪ್ರತಿನಿಧಿ ಅನೂಷ ದೇವಾಡಿಗ, ದಾಕ್ಷಾಯಿಣಿ ಅಣ್ಣಪ್ಪ ಆಚಾರಿ, ಕುಪ್ಪಯ್ಯ ಆಚಾರಿ ಭಾಗವಹಿಸಿ ಕಾರ್ಯವನ್ನು ಯಸಶ್ವಿಗೊಳಿಸಿರುತ್ತಾರೆ. 

ಈ ಕಾರ್ಯ ನೋಡಿದ ಸ್ಥಳೀಯರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿಪತ್ತು ನಿರ್ವಹಣಾ ಘಟಕಕ್ಕೆ ಶುಭ ಹಾರೈಸಿರುತ್ತಾರೆ. ಮತ್ತು ಸೇವಾಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ವರದಿ:

ಮಾದೇವ
ಸಂಯೋಜಕ
ವಿಪತ್ತು ನಿರ್ವಹಣಾ ಘಟಕ
ಭಟ್ಕಳ ನಗರ


Comments