ಕುಮಟಾ: ರಸ್ತೆಯಲ್ಲಿ ವಾಹನಕ್ಕೆ ಸಿಲುಕಿ ಮರಣ ಹೊಂದಿದ ಮಂಗವನ್ನು ತೆರವುಗೊಳಿಸಿ ದಫನ ಮಾಡಿದ ಹಿರೇಗುತ್ತಿ ಘಟಕದ ಸ್ವಯಂಸೇವಕ.

ಕುಮಟಾ, ಅಕ್ಟೋಬರ್ 22: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅದೆಷ್ಟೋ ಪ್ರಾಣಿಗಳು ವೇಗವಾಗಿ ಚಲಿಸುವ ವಾಹನಗಳ ಅಡಿಯಲ್ಲಿ ಸಿಲುಕಿ ಮರಣ ಹೊಂದುತ್ತಿರುತ್ತವೆ. ಹಾಗೆ ಮರಣ ಹೊಂದಿದ ಪ್ರಾಣಿಗಳು ಅನಾಥವಾಗಿ ರಸ್ತೆಯಲ್ಲಿ ಬಿದ್ದು ಅಲ್ಲಿ ಓಡಾಡುವ ಇತರ ವಾಹನಗಳ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾಗುವುದೂ ಇದೆ.
ಹಾಗೆ ರಸ್ತೆಯಲ್ಲಿ ಬಿದ್ದಿರುವ ಪ್ರಾಣಿಯನ್ನು ರಸ್ತೆಯ ಮೇಲಿಂದ ತೆರವುಗೊಳಿಸುವವರ ಸಂಖ್ಯೆ ಅತಿ ವಿರಳ. ರಸ್ತೆಯಲ್ಲಿ ಓಡಾಡುವ ವಾಹನ ಸವಾರರು, ದಾರಿ ಹೋಕರು ನೋಡಿಯೂ ನೋಡದಂತೆ ತೆರಳುವ ಪ್ರಮೇಯವೇ ಹೆಚ್ಚು.

ಆದರೆ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಹಿರೇಗುತ್ತಿ ಘಟಕದ  ಸ್ವಯಂಸೇವಕರಾದ ಮಾರುತಿ ಅವರು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಗುಳ್ಳಾಪುರಕ್ಕೆ ಹೋಗುವ ಮಾರ್ಗದಲ್ಲಿ ವಾಹನ ಬಡಿದು ಮರಣ ಹೊಂದಿರುವ ಮಂಗವೊಂದನ್ನು ರಸ್ತೆಯಿಂದ ತೆರವುಗೊಳಿಸಿ ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಒಂದಲ್ಲಾ ಒಂದು ಸೇವಾಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಾರುತಿ ಅವರ ಸೇವಾಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

Comments