ಕುಮಟಾ: ರಸ್ತೆ ಅಪಘಾತದಲ್ಲಿ ಬೆನ್ನು ಮೂಳೆ ಮುರಿದುಕೊಂಡ ಕಪಿ: ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವಿಪತ್ತು ನಿರ್ವಹಣೆ ಸಂಯೋಜಕ ಹರೀಶ್.

ಕುಮಟಾ, ಅಕ್ಟೋಬರ್ 25:  ಹೆಗಡೆ ಗ್ರಾಮದ ಮೋಹನ ಶಾನಭಾಗ ಅವರ ಮನೆಯ ಎದುರಿನ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿರುವ ಬೈಕಿಗೆ ಕೋತಿ ಅಡ್ಡ ಬಂದು ಅಪಘಾತ ಸಂಭವಿಸಿದ ಘಟನೆ ಇಂದು ನಡೆದಿದೆ.

ಅಪಘಾತದಲ್ಲಿ ಬೈಕ್ ಸವಾರ ಕೈ ಮುರಿದುಕೊಂಡಿದ್ದು ಆತನನ್ನು ಅವರ ಮನೆಯವರು ಆಗಮಿಸಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಅಪಘಾತಕ್ಕೆ ತುತ್ತಾಗಿ ಬೈಕಿನ ಗಾಲಿಗೆ ಸಿಕ್ಕಿ ಗಾಯಗೊಂಡಿರುವ ಕೋತಿ ಬೆನ್ನೆಲುಬು ಮುರಿದು ಕೊಂಡು  ರಸ್ತೆಯಲ್ಲಿ ಒದ್ದಾಡುತ್ತಿತ್ತು. ಏಕಾಂಗಿಯಾಗಿ ನರಳಾಡುತ್ತಿತ್ತು. ದಾರಿಹೋಕರು ಗಮನಿಸಿಯೂ ಅಲಕ್ಷ್ಯ ತೋರುವುದು ಹಲವು ಗಂಟೆಯವರೆಗೆ ಮುಂದುವರಿದಿತ್ತು.

ದಾರಿಯಲ್ಲಿ ಸಾಗುತ್ತಿರುವಾಗ ಇದನ್ನು ಗಮನಿಸಿದ ವಿಪತ್ತು ನಿರ್ವಹಣೆ, ಹೆಗಡೆ ಘಟಕದ ಸಂಯೋಜಕ ಹರೀಶ್ ನಾಯ್ಕ್ ಅವರು ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಬರುವವರೆಗೆ ಕೋತಿಯ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಅರಣ್ಯ ಇಲಾಖೆಯವರ ವಾಹನ ಬಂದ ಮೇಲೆ ಕಪಿಯನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ.

ಹರೀಶ್ ಅವರ ಮನವಿಗೆ ಕೂಡಲೇ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

 ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಹರೀಶ್ ನಾಯ್ಕ್ ಅವರ ಸೇವಾಕಾರ್ಯ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ. ಹರೀಶ್ ಅವರಿಗೆ ಸ್ಥಳೀಯರು ಸಹಕರಿಸಿ ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ವರದಿ:

ಹರೀಶ್ ನಾಯ್ಕ
ಸಂಯೋಜಕ
ವಿಪತ್ತು ನಿರ್ವಹಣಾ ಘಟಕ, ಹೆಗಡೆ.

Comments