ಗುರುವಾಯನಕೆರೆ: ಬಡ ಕುಟುಂಬವೊಂದಕ್ಕೆ ಶೌಚಾಲಯ ರಚನೆಗೆ ನೆರವಾದ ಹೊಸಂಗಡಿ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.
ಗುರುವಾಯನಕೆರೆ, ನವಂಬರ್ 07: ಶ್ರೀಧರ್ಮಸ್ಥಳ ವಿಪತ್ತು ಸೇವಾ ಹೊಸಂಗಡಿ ಘಟಕದ ಸಂಯೋಜಕಿ ಜಯಶೀಲ ಅವರು ಎಂಭತ್ತೈದು ವರ್ಷದ ವಯೋವೃದ್ಧೆ ಅಪ್ಪಿ ಪೂಜಾರ್ತಿ ಅವರ ಕುಟುಂಬವನ್ನು ಭೇಟಿ ಮಾಡಿ, ಅವರು ಶೌಚಾಲಯ ಇಲ್ಲದೇ ಎದುರಿಸುತ್ತಿರುವ ಸಮಸ್ಯೆಯನ್ನು ಗಮನಿಸಿ, ವಿವಿಧ ಸಂಘ ಸಂಸ್ಥೆಗಳ ಗಮನಕ್ಕೆ ತಂದು ಅವುಗಳ ನೆರವಿನೊಂದಿಗೆ ಹೊಸದಾಗಿ ಶೌಚಾಲಯ ರಚನೆ ಮಾಡುವಲ್ಲಿ ಪ್ರಯತ್ನಿಸಿ ಮಾನವೀಯ ಕಾರ್ಯವೊಂದನ್ನು ಮಾಡಿದ್ದಾರೆ.
( ಸಮಸ್ಯೆ ಆಲಿಸಲು ಮನೆ ಭೇಟಿ ನೀಡಿದ ಸಂದರ್ಭ)
ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕದ ಸ್ವಯಂಸೇವಕರಾದ ರವೀಂದ್ರ ಅವರು ಕಾಶಿಪಟ್ಣ ಗ್ರಾಮದ ಅಪ್ಪಿ ಪೂಜಾರ್ತಿ ಅವರು ಶೌಚಾಲಯವಿಲ್ಲದೇ ಎದುರಿಸುತ್ತಿರುವ ಸಮಸ್ಯೆಯನ್ನು ಗ್ರಾಮಸ್ಥರಿಂದ ತಿಳಿದು ವಿಪತ್ತು ನಿರ್ವಹಣೆ ಸಂಯೋಜಕಿ ಜಯಶೀಲ ಅವರಿಗೆ ಮಾಹಿತಿಯನ್ನು ನೀಡಿದ್ದರು.
ವಿಷಯವನ್ನು ತಿಳಿದ ಸಂಯೋಜಕಿ ಜಯಶೀಲಾ ಅವರು ರವೀಂದ್ರ ಅವರೊಂದಿಗೆ ಅಪ್ಪಿ ಪೂಜಾರ್ತಿ ಅವರ ಮನೆ ಭೇಟಿ ಮಾಡಿ ಕುಟುಂಬದ ಪರಿಸ್ಥಿತಿಯನ್ನು ಅರಿತುಕೊಂಡರು.
ಇವರ ಕುಟುಂಬದಲ್ಲಿ ಅಪ್ಪಿ ಪೂಜಾರ್ತಿ ಅವರ ಮಗಳಾದ ಮೋಹಿನಿ ಮತ್ತು ಮೂವರು ಹೆಣ್ಣು ಮಕ್ಕಳು ವಾಸವಿದ್ದಾರೆ.
ಮೊದಲ ಮಗಳು ಪಿಯುಸಿ ಓದುತ್ತಿದ್ದು ಎರಡನೆ ಮಗ ಹತ್ತನೇ ತರಗತಿ ಓದುತ್ತಿದ್ದಾನೆ. ಇನ್ನೋರ್ವ ಮಗ ಚಿಕ್ಕವನು.
ಚಿಕ್ಕದಾದ ಮನೆಯಲ್ಲಿ ವಾಸವಾಗಿರುವ ಇವರು ಶೌಚಕ್ಕಾಗಿ ಬಯಲನ್ನೇ ನೆಚ್ಚಿಕೊಂಡಿರಬೇಕಾಗಿತ್ತು. ಬೇಸಿನ್ ಅಳವಡಿಸಿದ ಶೌಚಾಲಯ ಮನೆಯಲ್ಲಿ ಇದ್ದರೂ ಅದು ತೆರೆದ ಮಾದರಿ ಆಗಿದ್ದರಿಂದ ಪರಿಸ್ಥಿತಿ ಶೋಚನೀಯವಾಗಿತ್ತು. ಮನೆಗೆ ಅತಿಥಿಗಳು ಬಂದರೆ ಹೆಣ್ಣುಮಕ್ಕಳು ಶೌಚಕ್ಕೆ ಎದುರಿಸುವ ಸಮಸ್ಯೆ ಕಠಿಣವಾಗಿತ್ತು.
ಎಂಬತ್ತೈದು ವರ್ಷ ವಯಸ್ಸಿನ ಅಪ್ಪಿ ಪೂಜಾರ್ತಿ ಅವರು ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ಹೊಸದಾಗಿ ಶೌಚಾಲಯ ರಚನೆ ಮಾಡಿಕೊಳ್ಳುವಷ್ಟು ಆರ್ಥಿಕ ಪರಿಸ್ಥಿತಿ ಅವರಲ್ಲಿ ಇರಲಿಲ್ಲ. ಹಾಗಾಗಿ ಇರುವ ಸಮಸ್ಯೆಯಲ್ಲಿಯೇ ದಿನದೂಡುತ್ತಿದ್ದರು.
ಇವರ ಪರಿಸ್ಥಿತಿಯನ್ನು ಅರಿತ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕಿ ಜಯಶೀಲ ಅವರು ನೆತ್ತೋಡಿ ಗ್ರಾಮದ ಸಂಪತ್ ಕುಮಾರ್ ಅವರಿಗೆ ಪರಿಸ್ಥಿತಿಯನ್ನು ವಿವರಿಸಿದರು.
ಸಾಮಾಜಿಕ ಕಳಕಳಿ ಹೊಂದಿರುವ ಸಂಪತ್ ಕುಮಾರ್ ಅವರು ಈ ವಿಷಯವನ್ನು ಮೂಡಬಿದಿರೆಯ ಯುವವಾಹಿನಿ ಸಂಘಟನೆಗೆ ತಿಳಿಸಿದರು. ಅಲ್ಲಿಂದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರಿಗೆ ವಿಷಯ ಮುಟ್ಟಿತು.
ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಕುಟುಂಬದ ಸಮಸ್ಯೆಯನ್ನು ಅರಿತು ಇಪ್ಪತ್ತೈದು ಸಾವಿರ ರೂಪಾಯಿಯ ಚೆಕ್ ನ್ನು ಅಪ್ಪಿ ಪೂಜಾರ್ತಿ ಅವರ ಮಗಳಾದ ಮೋಹಿನಿ ಅವರಿಗೆ ಹಸ್ತಾಂತರಿಸಿದರು. ಮತ್ತು ಶೌಚಾಲಯ ರಚಿಸಿಕೊಳ್ಳುವಂತೆ ತಿಳಿಸಿದರು.
ಅಪ್ಪಿ ಪೂಜಾರ್ತಿ ಅವರ ಕುಟುಂಬದಲ್ಲಿ ಈಗ ಹೊಸದಾಗಿ ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಾಣವಾಗಿದೆ.
ಇದಕ್ಕೆ ಒಟ್ಟು ನಲವತ್ತೈದು ಸಾವಿರ ರೂಪಾಯಿ ಖರ್ಚಾಗಿರುತ್ತದೆ. ಇಪ್ಪತ್ತೈದು ಸಾವಿರ ರೂಪಾಯಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನೀಡಿದ್ದಾರೆ.
ವರದಿ:
ಜೈವಂತ ಪಟಗಾರ
ಯೋಜನಾಧಿಕಾರಿ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಕ್ರಮ
ಜನಜಾಗೃತಿ ವೇದಿಕೆ, ಬೆಳ್ತಂಗಡಿ
Comments
Post a Comment