ನೇತ್ರಾವತಿ ನದಿಯ ಸ್ನಾನಘಟ್ಟ, ರಸ್ತೆಯ ಇಕ್ಕೆಲಗಳಲ್ಲಿ 300 ಕ್ಕೂ ಮಿಕ್ಕಿದ ಶೌರ್ಯ ಸ್ವಯಂಸೇವಕರಿಂದ ಸ್ವಚ್ಚತಾ ಶ್ರಮದಾನ

ನೇತ್ರಾವತಿ ನದಿಯ ಸ್ನಾನ ಘಟ್ಟ ಹಾಗೂ ಸೇತುವೆಯಿಂದ ಧರ್ಮಸ್ಥಳದ ದ್ವಾರದ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಶ್ರಮದಾನವನ್ನು ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಬೆಳ್ತಂಗಡಿ, ಗುರುವಾಯನಕೆರೆಯ ಸ್ವಯಂಸೇವಕರು ನಡೆಸಿದರು. 
ಸುಮಾರು 250 ಶೌರ್ಯ ಸ್ವಯಂಸೇವಕರು, ಧರ್ಮಸ್ಥಳ ಗ್ರಾಮದ ಸ್ಥಳೀಯರು, ಯುವತಿ ಮಂಡಳದ ಸದಸ್ಯರು, ಯೋಜನೆಯ ಕಾರ್ಯಕರ್ತರು, ದೇವಳದ ಸಿಬ್ಬಂದಿಗಳು ಸೇರಿದಂತೆ ಸುಮಾರು 400 ಮಂದಿ ಶ್ರಮದಾನದಲ್ಲಿ ಭಾಗವಹಿಸಿದ್ದರು.
ಬೆಳಿಗ್ಗೆ 8 ಗಂಟೆಗೆ ಆರಂಭವಾದ ಶ್ರಮದಾನ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಿತು. ನಂತರ ಸಮಿತಿ ಸಭೆ ಕೇಂದ್ರ ಕಚೇರಿ ಸಂಭಾಂಗಣದಲ್ಲಿ ನಡೆಯಿತು. ಪೂಜ್ಯರು ಶೌರ್ಯ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಶೌರ್ಯ ಸ್ವಯಂಸೇವಕರ ಸೇವೆಗಳನ್ನು ಶ್ಲಾಘಿಸಿದರು. 
ನಂತರ ಸ್ವಯಂಸೇವಕರ ಜೊತೆಗಿನ ಗ್ರೂಪ್ ಫೋಟೋ ವನ್ನು ತಮ್ಮದೇ ಮೊಬೈಲ್ ನಲ್ಲಿ ತೆಗೆದುಕೊಂಡಿದ್ದು ವಿಶೇಷವಾಗಿತ್ತು.
ಯೋಜನೆಯ ಮುಖ್ಯ ನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್‌. ಎಸ್ ರವರು ಸ್ವಯಂಸೇವಕರ ಶ್ರಮದಾನವನ್ನು ವೀಕ್ಷಿಸಿ ಪ್ರೋತ್ಸಾಹ ನೀಡುವುದರೊಂದಿಗೆ ಸಭೆಯಲ್ಲಿ ಉಪಸ್ಥಿತರಿದ್ದು ಸ್ವಯಂಸೇವಕರಿಗೆ ಪ್ರೇರಣೆ ನೀಡಿದರು.
ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರ ಮಾರ್ಗದರ್ಶನದಲ್ಲಿ ಸಂಪೂರ್ಣ ಸ್ವಚ್ಚತಾ ಶ್ರಮದಾನ ಯಶಸ್ವಿಯಾಗಿ ನಡೆಯಿತು. ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇ ಗೌಡ, ಜಿಲ್ಲಾ ನಿರ್ದೇಶಕರಾದ ಶ್ರೀ ಮಹಾಬಲ ಕುಲಾಲ್, ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಶ್ರೀ ಸುರೇಂದ್ರ ಕುಮಾರ್, ಗುರುವಾಯನಕೆರೆ ಯೋಜನಾಧಿಕಾರಿ ಶ್ರೀ ದಯಾನಂದ,
 ಮೇಲ್ವಿಚಾರಕರು, ಘಟಕ ಪ್ರತಿನಿಧಿಗಳು, ಸಂಯೋಜಕರು, ಸ್ವಯಂಸೇವಕರು ಉಪಸ್ಥಿತರಿದ್ದರು. ನವಲಗುಂದ ತಾಲ್ಲೂಕಿನ ಸಂಶಿ ಘಟಕದ ಸ್ವಯಂಸೇವಕರು, ಕಾರ್ಕಳ, ಕಡಬ ಮತ್ತು ಪುತ್ತೂರು ತಾಲೂಕಿನ ಸ್ವಯಂಸೇವಕರು ಸ್ವಯಂ ಪ್ರೇರಣೆ ಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Comments