ಯಲ್ಲಾಪುರ: 'ಶೌರ್ಯ' ಸ್ವಯಂಸೇವಕರಿಗೆ ಜೀವ ರಕ್ಷಣಾ ಕೌಶಲ್ಯ ಕಾರ್ಯಾಗಾರ. ವಿಪತ್ತು ನಿರ್ವಹಣೆಗೆ ಸನ್ನದ್ದುಗೊಂಡ 120 ಸ್ವಯಂಸೇವಕರ ಪಡೆ.

ಯಲ್ಲಾಪುರ, ಅಕ್ಟೋಬರ್ 17: 'ಶೌರ್ಯ' ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಶಿರಸಿ ಇದರ ಸ್ವಯಂಸೇವಕರಿಗೆ  ವಾರ್ಷಿಕ ತರಬೇತಿ ಕಾರ್ಯಕ್ರಮ "ಜೀವ ರಕ್ಷಣಾ ಕೌಶಲ್ಯ ತರಬೇತಿ" ನಡೆಯಿತು. 
ತರಬೇತಿಯನ್ನು ಜಿಲ್ಲಾ ನಿರ್ದೇಶಕರಾದ ಶ್ರೀ ಎ. ಬಾಬು ನಾಯ್ಕ್ ರವರು ಉದ್ಘಾಟನೆ ನಡೆಸಿ ಮಾತನಾಡಿದರು.

ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಸ್ವಯಂಸೇವಕರು ಶಿಸ್ತು ರೂಢಿಸಿಕೊಳ್ಳಬೇಕು. ಜೀವ ರಕ್ಷಣಾ ಕೌಶಲ್ಯ ಎಲ್ಲರಿಗೂ ತಿಳಿದಿರಬೇಕು. ಸಮಯ ಬಂದಾಗ ತಾವು ಕಲಿತ ವಿದ್ಯೆಯನ್ನು ಅನುಷ್ಠಾನಕ್ಕೆ ತರಬೇಕು. ಸ್ವಯಂಸೇವಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು ಎಂದರು. 
ಘಟಕದ ಸ್ವಯಂಸೇವಕರು ಬದ್ದತೆ, ಸಮಯ ಪ್ರಜ್ಞೆ ರೂಢಿಸಿಕೊಂಡು ಸಮಾಜ ಸೇವೆಯಲ್ಲಿ ಮಾದರಿಯಾಗಿ ತೊಡಗಿಕೊಳ್ಳಬೇಕು. ವಿಪತ್ತು ನಿರ್ವಹಣಾ ಸೇವೆ ಮಾಡುವಾಗ ಮೊದಲು ತಮ್ಮ ರಕ್ಷಣೆಗೆ ಗಮನ ಕೊಡಬೇಕು. ಯೋಧರಂತೆ ಸಮಾಜದಲ್ಲಿ ನೆರವಿಗೆ ನಿಲ್ಲಬೇಕು,  ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯಿಂದ ಎರಡು ಲಕ್ಷ ರೂಪಾಯಿ ಮೌಲ್ಯದ ರಕ್ಷಣಾ ಪರಿಕರಗಳನ್ನು ನೀಡಲಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಗ್ನಿಶಾಮಕ, ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಸ್ವಯಂಸೇವಕರು ತಯಾರಾಗಬೇಕು ಎಂದರು.
ಅಗ್ನಿಶಾಮಕ ಠಾಣಾಧಿಕಾರಿ ಶ್ರೀ ಸುಧೀರ್ ಕಿಂದಾಳ್ಕರ್ ಮಾತನಾಡಿ ಧರ್ಮಸ್ಥಳ ಸಂಸ್ಥೆ ಉತ್ತಮವಾದ ಕೆಲಸ ಮಾಡುತ್ತಿದೆ. ವಿಪತ್ತು ನಿರ್ವಹಣೆಗೆ ಸ್ವಯಂಸೇವಕರ ತಂಡವನ್ನು ಹುಟ್ಟು ಹಾಕಿದ್ದು ಮಾದರಿ ಕಾರ್ಯವಾಗಿದೆ. ಅಗ್ನಿಶಾಮಕದಳದೊಂದಿಗೆ ಸ್ವಯಂಸೇವಕರು ಕೈಜೋಡಿಸಿದಲ್ಲಿ ಅನೇಕ ಅಪಾಯಗಳನ್ನು ತಡೆಯಬಹುದು. ಸ್ವಯಂಸೇವಕರು ಲೈಫ್ ಜಾಕೆಟ್, ಲೈಫ್ ಬಾಯ್ ಪರಿಕರಗಳನ್ನು ಬಳಸಿಕೊಂಡು ರಕ್ಷಣೆಗೆ ಮುಂದಾಗಬೇಕು ಎಂದರು.
ಉಷಾ ಫೈರ್ ಸೇಫ್ಟಿ ಕಂಪನಿಯ ತರಬೇತಿದಾರರಾದ ಶ್ರೀ ಸಂತೋಷ ಪೀಟರ್ ಡಿಸೋಜ ರವರು ತರಬೇತಿ ನೀಡಿದರು. 

ವಿಪತ್ತು ಎದುರಿಸಲು ಅಗತ್ಯ ಇರುವ ಪರಿಕರಗಳು. ವಿಪತ್ತು ಸನ್ನದ್ದತೆ, ಅಪಾಯ ಗುರುತಿಸುವಿಕೆ, ತಕ್ಷಣದ ಸ್ಪಂದನೆಗೆ ಅಗತ್ಯ ಕ್ರಮಗಳು, ಅಗತ್ಯ ಪರಿಕರಗಳು, ಪ್ರಥಮ ಚಿಕಿತ್ಸಾ ವಿಧಾನಗಳು, ಬೆಂಕಿ ಅವಗಢ ನಿರ್ವಹಣಾ ವಿಧಾನಗಳು, ಅಗ್ನಿ ನಂದಕಗಳ ವಿಧಗಳು, ಅಗ್ನಿ ನಂದಕದ ಬಳಕೆ, ರಸ್ತೆ ಅಪಘಾತದಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆ, ಪ್ರಥಮ ಚಿಕಿತ್ಸೆ, ಅಂಬುಲೆನ್ಸ್ ಕರೆಸುವ ವಿಧಾನ, ಗಾಯಾಳುಗಳನ್ನು ಕೊಂಡೊಯ್ಯುವ ವಿಧಾನ ಇತ್ಯಾದಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.
ಮಾವಿನಮನೆ, ಹುಬ್ನಳ್ಳಿ, ಇಡಗುಂದಿ, ಓಣಿಕೇರಿ, ಮಂಚಿಕೇರಿ, ಹಿರೇಹಳ್ಳಿ ಹಾಗೂ ಮುಂಡಗೋಡ ಭಾಗದ ಸುಮಾರು 90  ಸ್ವಯಂಸೇವಕರು ತರಬೇತಿಯಲ್ಲಿ ಹಾಜರಿದ್ದು ತರಬೇತಿ ಪಡೆದಿದ್ದಾರೆ.
ಯಲ್ಲಾಪುರ ತಾಲೂಕಿನ ಅಗ್ನಿಶಾಮಕ ದಳದ ಸಿಬ್ಬಂದಿಗಳು, ತಾಲ್ಲೂಕು ಯೋಜನಾಧಿಕಾರಿ ಹನುಮಂತ ನಾಯ್ಕ, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್, ಶೌರ್ಯ ಘಟಕದ ಮಾಸ್ಟರ್ ಸುಧೀರ್, ಕ್ಯಾಪ್ಟನ್ ಚಂದ್ರಶೇಖರ್, ತರಬೇತಿದಾರರಾದ ದಿನೇಶ್, ಸಂಯೋಜಕರು, ಘಟಕ ಪ್ರತಿನಿಧಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು.

ವರದಿ: ವಿಪತ್ತು ನಿರ್ವಹಣಾ ವಿಭಾಗ

Comments