ಸಿದ್ದಾಪುರ: 'ಆಪತ್ತಿನಲ್ಲಿರುವವರಿಗೆ ಆಪತ್ ಬಾಂಧವರಾಗುವ ಕೆಲಸವನ್ನು ಶೌರ್ಯ' ಸ್ವಯಂಸೇವಕರು ಮಾಡಬೇಕು: ಎ. ಬಾಬು ನಾಯ್ಕ್, ಜಿಲ್ಲಾ ನಿರ್ದೇಶಕರು
ಸಿದ್ದಾಪುರ, ಅಕ್ಟೋಬರ್ 18: 'ಶೌರ್ಯ' ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಶಿರಸಿ ಇದರ ಸ್ವಯಂಸೇವಕರಿಗೆ ವಾರ್ಷಿಕ ತರಬೇತಿ ಕಾರ್ಯಕ್ರಮ "ಜೀವ ರಕ್ಷಣಾ ಕೌಶಲ್ಯ ತರಬೇತಿ" ನಡೆಯಿತು.
ತರಬೇತಿಯನ್ನು ಉದ್ಘಾಟಿಸಿ ನೂತನವಾಗಿ ಆಯ್ಕೆಯಾದ ಸ್ವಯಂಸೇವಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಶ್ರೀ ಎ. ಬಾಬು ನಾಯ್ಕ್ ರವರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಸ್ವಯಂಸೇವಕರು ಶಿಸ್ತು ಮತ್ತು ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ಪೂಜ್ಯರು ಶಿಸ್ತು ಮತ್ತು ಸಮಯ ಪ್ರಜ್ಞೆಗೆ ಮಾದರಿ. ಅವರ ಆಶೀರ್ವಾದದಲ್ಲಿ ನಡೆಸುವ ಶೌರ್ಯ ತಂಡದ ಸದಸ್ಯರು ಕೂಡ ಶಿಸ್ತು ರೂಢಿಸಿಕೊಳ್ಳಬೇಕು.
ಕಷ್ಟ ಕಾಲದಲ್ಲಿ ಸಹಾಯ ಮಾಡಿದವರಿಗೆ ದೇವರು ಬಂದಂತೆ ಬಂದಿರಿ ಎಂದು ಶ್ಲಾಘಿಸುವುದಿದೆ. ಕಷ್ಟದಲ್ಲಿರುವವರ ಪಾಲಿಗೆ ದೇವರಾಗುವಂತೆ ಕೆಲಸ ಮಾಡಬೇಕು. ಸ್ವಯಂಸೇವಕರು ದುಶ್ಚಟ, ದುರಭ್ಯಾಸ ಹೊಂದಿರಬಾರದು.
ಸಮಯ ಬಂದಾಗ ತರಬೇತಿಯಲ್ಲಿ ಕಲಿತ ವಿದ್ಯೆಯನ್ನು ಅನುಷ್ಠಾನಕ್ಕೆ ತರಬೇಕು. ಸ್ವಯಂಸೇವಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು ಎಂದರು.
ವಿಪತ್ತು ನಿರ್ವಹಣಾ ಸೇವೆ ಮಾಡುವಾಗ ಮೊದಲು ತಮ್ಮ ರಕ್ಷಣೆಗೆ ಗಮನ ಕೊಡಬೇಕು. ಯೋಧರಂತೆ ಸಮಾಜದಲ್ಲಿ ನೆರವಿಗೆ ನಿಲ್ಲಬೇಕು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎರಡು ಲಕ್ಷ ರೂಪಾಯಿ ಮೌಲ್ಯದ ರಕ್ಷಣಾ ಪರಿಕರಗಳನ್ನು ನೀಡಲಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಗ್ನಿಶಾಮಕ, ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಸ್ವಯಂಸೇವಕರು ತಯಾರಾಗಬೇಕು ಎಂದರು.
ಉಷಾ ಫೈರ್ ಸೇಫ್ಟಿ ಕಂಪನಿಯ ತರಬೇತಿದಾರರಾದ ಶ್ರೀ ಸಂತೋಷ ಪೀಟರ್ ಡಿಸೋಜ ರವರು ಸ್ವಯಂಸೇವಕರಿಗೆ ತರಬೇತಿ ನೀಡಿದರು.
ವಿಪತ್ತು ಎದುರಿಸಲು ಅಗತ್ಯ ಇರುವ ಪರಿಕರಗಳು. ವಿಪತ್ತು ನಿರ್ವಹಣೆಗೆ ಸನ್ನದ್ದತೆ, ಅಪಾಯವನ್ನು ಗುರುತಿಸುವುದು. ತಕ್ಷಣದ ಸ್ಪಂದನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು, ರಕ್ಷಣಾ ಚಟುವಟಿಕೆಗಳಿಗೆ ಅಗತ್ಯ ಪರಿಕರಗಳು, ಪ್ರಥಮ ಚಿಕಿತ್ಸಾ ವಿಧಾನಗಳು, ಬೆಂಕಿ ಅವಗಢ ನಿರ್ವಹಣಾ ವಿಧಾನಗಳು, ಅಗ್ನಿ ನಂದಕಗಳ ವಿಧಗಳು, ಅಗ್ನಿ ನಂದಕದ ಬಳಕೆ, ರಸ್ತೆ ಅಪಘಾತದಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆ, ಪ್ರಥಮ ಚಿಕಿತ್ಸೆ, ಅಂಬುಲೆನ್ಸ್ ಕರೆಸುವ ವಿಧಾನ, ಗಾಯಾಳುಗಳನ್ನು ಕೊಂಡೊಯ್ಯುವ ವಿಧಾನ ಇತ್ಯಾದಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.
ಹಾರ್ಸಿಕಟ್ಟಾ, ಕಾನಸೂರು, ಕಾವಂಚೂರು, ಕ್ಯಾದಗಿ, ತಾಳಗುಪ್ಪ, ಸಿದ್ದಾಪುರ, ಕಾರ್ಗಲ್ ಭಾಗದ ಸುಮಾರು 92 ಸ್ವಯಂಸೇವಕರು ತರಬೇತಿಯಲ್ಲಿ ಹಾಜರಿದ್ದು ತರಬೇತಿ ಪಡೆದಿದ್ದಾರೆ.
ತಾಲ್ಲೂಕು ಯೋಜನಾಧಿಕಾರಿ ಗಿರಿಶ್ ಪಾವಸ್ಕರ್, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್, ಶೌರ್ಯ ಘಟಕದ ಮಾಸ್ಟರ್ ಚಂದ್ರಶೇಖರ್, ಕ್ಯಾಪ್ಟನ್ ಮಂಜುನಾಥ ತರಬೇತಿದಾರರಾದ ದಿನೇಶ್, ಸಂಯೋಜಕರು, ಘಟಕ ಪ್ರತಿನಿಧಿಗಳು, ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.
ವರದಿ: ವಿಪತ್ತು ನಿರ್ವಹಣಾ ವಿಭಾಗ
Comments
Post a Comment