ನದಿಯಲ್ಲಿ ಮುಳುಗಿದ ವ್ಯಕ್ತಿಯ ಪತ್ತೆಗೆ ರಾತ್ರಿಯಲ್ಲಿ ಕಾರ್ಯಾಚರಣೆ; ಶೌರ್ಯ ಸ್ವಯಂಸೇವಕರು ಭಾಗಿ.

ಬೆಳ್ತಂಗಡಿ,  03 ಡಿಸೆಂಬರ್ 2024: 
ಬೆಳಾಲು ಗ್ರಾಮದ ಕೂಡಿಗೆ ಬಳಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಪ್ರಸಾದ್ ಬೆಳಾಲು ಎಂಬ ಯುವಕ ನಾಪತ್ತೆಯಾದ ವಿಷಯ ತಿಳಿದು ಹುಡುಕುವ ಕಾರ್ಯಾಚರಣೆ ಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಗಳೊಂದಿಗೆ ಶೌರ್ಯ ತುರ್ತು ಸ್ಪಂದನಾ ತಂಡದ ಸದಸ್ಯರು ನಡೆಸಿದರು.

ಸಂಜೆಯ ವೇಳೆಯಲ್ಲಿ ನದಿಗೆ ಮೀನು ಹಿಡಿಯಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತರಾಗಿರುವ ಬಗ್ಗೆ ತಿಳಿದು ಬಂದಿದ್ದು ಮೃತ ದೇಹ ತೆರವು ಕಾರ್ಯಾಚರಣೆಯನ್ನು ಸ್ವಯಂಸೇವಕರು ನಡೆಸಿದರು.

 ವಿಷಯ ತಿಳಿದ ಕೂಡಲೇ ತುರ್ತು ಸ್ಪಂದನಾ ಘಟಕದ ಸಂಯೋಜಕ ಸುಲೈಮಾನ್ ಬೆಳಾಲು, ತಾಲೂಕು ಕ್ಯಾಪ್ಟನ್ ಸಂತೋಷ ಮಾಚಾರ್, ಜಗದೀಶ್ ಪಲ್ಲಿದಡ್ಕ, ಸಂಜೀವ ಮುಂತಾದವರು ಸ್ಥಳಕ್ಕೆ ತೆರಳಿದರು. ಬಳಿಕ ಅಗ್ನಿ ಶಾಮಕ ದಳದವರು ಬಂದ ಮೇಲೆ ಅವರ ಬೋಟ್ ನಲ್ಲಿ ನಿರಂತರ ಎರಡು ಗಂಟೆ ಹುಡುಕಾಟ ನಡೆಸಿದಾಗ ರಾತ್ರಿ 11 ಗಂಟೆ ಸುಮಾರಿಗೆ ನದಿಯ ನೀರಿನಾಳದಲ್ಲಿ ಮೃತದೇಹ ಸಿಕ್ಕಿತು. 

ಬೆಳ್ತಂಗಡಿಯ ಮುಳುಗುಗಾರ ಇಸ್ಮಾಯಿಲ್ ಮತ್ತು ಬೆಳಾಲಿನ ಜೆಸಿಬಿ ಚಾಲಕರಾಗಿರುವ ಶಾಕಿರ್ ರವರು ಮೃತದೇಹ ಪತ್ತೆ ಮಾಡಿದರು.

ವಿಷಯ ತಿಳಿದು ರಾತ್ರಿಯೇ ಸ್ಥಳಕ್ಕೆ ಧಾವಿಸಿದ ಘಟಕದ ಇತರ ಸದಸ್ಯರಾದ ಅವಿನಾಶ್ ಭಿಡೆ, ರವೀಂದ್ರ ಉಜಿರೆ, ಕಿರಣ್, ರಮೇಶ್ ಭೈರಕಟ್ಟ, ಸುಧೀರ್ ಉಜಿರೆ, ರಾಘವೇಂದ್ರ ವೇಣೂರು, ಹರೀಶ್ ಕೂಡಿಗೆ, ಧಣೇಶ್ ಉಜಿರೆ ಇವರು ಶವದ ಮಹಜರು ಇತ್ಯಾದಿ ಕೆಲಸಗಳಲ್ಲಿ ತೊಡಗಿಕೊಂಡರು.

ಧರ್ಮಸ್ಥಳ ಪೊಲೀಸ್ ಠಾಣೆಯ ಎಸ್. ಐ. ಕಿಶೋರ್ ಮತ್ತು ಇತರ ಪೊಲೀಸರು ಮಹಜರು ಕಾರ್ಯ ನಡೆಸಿದರು.

ವರದಿ: ಸುಲೈಮಾನ್, ಬೆಳಾಲು

Comments

Post a Comment